ಕೊರೋನಾ ವೈರಸ್ ಅನ್ನು ಇಂದು ನಾವು ಕೇವಲ ಕೊರೋನಾ ಸೋಂಕಿತರ ಸಂಪರ್ಕವನ್ನು ಹೊಂದಿರುವವರಿಂದ ಮಾತ್ರ ಹರಡುತ್ತದೆ ಎಂದು ತಿಳಿದಿದ್ದೆವು. ಆದರೆ ಕೊರೋನಾ ವೈರಸ್ ವ್ಯಾಪ್ತಿ ಮತ್ತಷ್ಟು ವಿಸ್ತರಿಸಿ ತ್ಯಾಜ್ಯ ನೀರಿನಲ್ಲೂ ಕೂಡ ಕೊರೋನಾ ವಂಶವಾಹಿಗಳು ಕಂಡು ಬಂದಿದೆ ಎಂಬುದನ್ನು ಸಂಶೋಧಕರ ತಂಡವೊಂದು ತಿಳಿಸಿದೆ. ಇದರಿಂದಾಗಿ ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ..

 

ಇದೇ ಮೊದಲ ಬಾರಿಗೆ ಭಾರತೀಯ ವಿಜ್ಞಾನಿಗಳು ತ್ಯಾಜ್ಯ ನೀರಿನಲ್ಲೂ ಕೋವಿಡ್ ವೈರಸ್‌ನ ವಂಶವಾಹಿಯನ್ನು ಪತ್ತೆಹಚ್ಚಿದ್ದಾರೆ. ತ್ಯಾಜ್ಯನೀರು ಆಧರಿತ ಸಾಂಕ್ರಾಮಿಕ ರೋಗಶಾಸ್ತ್ರದ ಮೂಲಕ ಕೋವಿಡ್ ಸೋಂಕು ಕುರಿತು ಅಧ್ಯಯನ ನಡೆಸಲು ಈ ಸಂಶೋಧನೆಯು ನೆರವಾಗಲಿದೆ.

 

ಗುಜರಾತ್‌ನಲ್ಲಿರುವ ಐಐಟಿ ಗಾಂಧಿನಗರದ ವಿಜ್ಞಾನಿಗಳ ತಂಡದ ಈ ಸಾಧನೆಗೆ ಜಾಗತಿಕ ಸಮುದಾಯವು ಶ್ಲಾಘನೆ ವ್ಯಕ್ತಪಡಿಸಿದೆ. ವಿಜ್ಞಾನಿಗಳ ತಂಡವು ಅಹಮದಾಬಾದ್‌ನ ತ್ಯಾಜ್ಯನೀರಿನಲ್ಲಿ ಕೊರೊನಾವೈರಸ್‌ನ ಆರ್‌ಎನ್‌ಎ ಹೆಚ್ಚಿನ ಪ್ರಮಾಣದಲ್ಲಿ ಇರುವುದನ್ನು ಪತ್ತೆ ಹಚ್ಚಿದೆ. ಈ ಮೂಲಕ ಕೋವಿಡ್ ಸೋಂಕಿಗೆ ಸಂಬಂಧಿಸಿ ತ್ಯಾಜ್ಯನೀರು ಆಧರಿತ ಸಾಂಕ್ರಾಮಿಕ ರೋಗಶಾಸ್ತ್ರ (ಡಬ್ಲ್ಯುಬಿಇ)ದ ಅಧ್ಯಯನ ನಡೆಸುತ್ತಿರುವ ಕೆಲವೇ ಕೆಲವು ರಾಷ್ಟ್ರಗಳ ಪೈಕಿ ಭಾರತವೂ ಸೇರಿದಂತಾಗಿದೆ ಎಂದು ಯುಕೆ ಸೆಂಟರ್‌ ಫಾರ್‌ ಇಕಾಲಜಿ ಆಯಂಡ್‌ ಹೈಡ್ರಾಲಜಿಯ ಪರಿಸರ ಸೂಕ್ಷ್ಮಜೀವ ಶಾಸ್ತ್ರಜ್ಞ ಆಯಂಡ್ರೂ ಸಿಂಗರ್‌ ಟ್ವೀಟ್‌ ಮಾಡಿದ್ದಾರೆ.

 

ತ್ಯಾಜ್ಯನೀರಿನಲ್ಲಿರುವ ವೈರಸ್‌ನ ಪ್ರಮಾಣವನ್ನು ನೋಡಿಕೊಂಡು ಆ ಪ್ರದೇಶದಲ್ಲಿ ರೋಗ ವ್ಯಾಪಿಸುವಿಕೆಯ ಸ್ಥಿತಿ ಹೇಗಿದೆ ಎಂದು ಅರಿಯುವುದೇ ತ್ಯಾಜ್ಯನೀರು ಆಧರಿತ ಸಾಂಕ್ರಾಮಿಕ ರೋಗಶಾಸ್ತ್ರ ಅಧ್ಯಯನದ ಆಶಯವಾಗಿದೆ. ಗಾಂಧಿನಗರ ಐಐಟಿ ವಿಜ್ಞಾನಿಗಳು ಮೇ 8 ಮತ್ತು 27ರಂದು ಓಲ್ಡ್‌ ಪಿರಾನಾ ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದ ಸಂಗ್ರಹಿಸಿದ ತ್ಯಾಜ್ಯನೀರನ್ನು ಪರೀಕ್ಷೆಗೆ ಒಳಪಡಿಸಿದ್ದರು. ಈ ಸ್ಥಾವರಕ್ಕೆ ಅಹಮದಾಬಾದ್‌ ಸಿವಿಲ್‌ ಆಸ್ಪತ್ರೆಯಿಂದ ದಿನಕ್ಕೆ 106 ದಶಲಕ್ಷ ಲೀಟರ್‌ ತ್ಯಾಜ್ಯವು ಸಂಸ್ಕರಣೆಗಾಗಿ ಬರುತ್ತದೆ. ಈ ನೀರಿನಲ್ಲಿ ಸಾರ್ಸ್‌ ಕೋವ್‌-2ರ ಎಲ್ಲ ಮೂರು ವಂಶವಾಹಿಗಳು ಇರುವುದು ಪತ್ತೆಯಾಗಿದೆ. ಆದರೆ, ಸಂಸ್ಕರಣೆಯಾದ ಬಳಿಕ ಹೊರಹೋಗುವ ನೀರಿನಲ್ಲಿ ಈ ಅಂಶ ಕಂಡುಬಂದಿಲ್ಲ.

 

ಇತ್ತೀಚೆಗಷ್ಟೇ, ಸೋಂಕಿತ ವ್ಯಕ್ತಿಯ ಮಲದಲ್ಲೂ ಸೋಂಕು ಇದ್ದು, ಸಂಸ್ಕರಣಾ ಸ್ಥಾವರವನ್ನು ಪ್ರವೇಶಿಸುವ ತ್ಯಾಜ್ಯನೀರಿನಲ್ಲಿ ವೈರಸ್‌ನ ಆರ್‌ಎನ್‌ಎ ಇರುವುದು ಪತ್ತೆಯಾಗಿತ್ತು.

 

మరింత సమాచారం తెలుసుకోండి: