ಬೆಂಗಳೂರು: ಹೊಂದಿಸಿ ಬರೆಯಿರಿಗೂ  ಸ್ಯಾಂಡಲ್ ವುಡ್ ಗೂ ಏನಪ್ಪಾ ಸಂಬಂಧ, ಯಾಕಿದು, ಏನು ಸಂಬಂಧ, ಯಾರು ಆ ನಾಲ್ಕು ಜನರು ಎಂದು ತಲೆಕೆಡೆಸಿ ಕೊಂಡಿದ್ದೀರ. ಹಾಗಾದರೆ ಈ ಸುದ್ದಿ ಓದಿ. ನಟಿಯರಾದ ಐಶಾನಿ ಶೆಟ್ಟಿ, ಭಾವನಾ ರಾವ್, ಸಂಯುಕ್ತಾ ಹೊರನಾಡು ಹಾಗೂ ಅರ್ಚನಾ ಜೋಯಿಸ್ ಇದೀಗ ಹೊಂದಿಸಿ ಬರೆಯಲು ಮುಂದಾಗಿದ್ದಾರೆ. ಅಂದರೆ ‘ಹೊಂದಿಸಿ ಬರೆಯಿರಿ’ ಸಿನಿಮಾದ ನಾಲ್ಕು ಪ್ರಮುಖ ಪಾತ್ರಗಳಲ್ಲಿ ಈ ನಾಲ್ವರೂ ಕಾಣಿಸಿಕೊಳ್ಳಲಿದ್ದಾರೆ.


ಇದೊಂದು ನಟಿ ಓರಿಯೆಂಟೆಡ್  ಚಿತ್ರವಾಗಿದ್ದು,  ‘ಸಂಡೇ ಸಿನಿಮಾಸ್’ ಲಾಂಛನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾಗೆ ಹೊಸ ಪ್ರತಿಭೆ ಜಗನ್ನಾಥ್ ಆಕ್ಷನ್-ಕಟ್ ಹೇಳುವ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿದ್ದಾರೆ. ಇವರಿಗೆ ಇದು ಮೊದಲ ಚಿತ್ರವಾದರೂ ’ರಾಕ್​ಲೈನ್ ಪ್ರೊಡಕ್ಷನ್ಸ್’ ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ಇದೆ. ‘ಇದು ಬದುಕಿನ ಕುರಿತ ಸಿನಿಮಾ. ಏನೇ ಬಂದರೂ ನಾವು ಅದನ್ನು ಹೊಂದಿಸಿ ಬರೆದು ಜೀವನ ರೂಪಿಸಿಕೊಳ್ಳಬೇಕು ಎಂಬುದು ಚಿತ್ರದ ಕಥಾಹಂದರ ಹಾಗೂ ಸಂದೇಶ ಕೂಡ’ ಎಂದು ಚಿತ್ರದ ಶೀರ್ಷಿಕೆ ಹಿಂದಿನ ವಿಶೇಷತೆಯನ್ನು ವಿವರಿಸುತ್ತಾರೆ ನಿರ್ದೇಶಕ ಜಗನ್ನಾಥ್.


 ‘ಇಲ್ಲಿ ನಾಲ್ಕು ಮಹಿಳಾ ಪಾತ್ರಗಳು ಜೀವನದ ಮಹತ್ವದ ಒಂದೊಂದು ಘಟ್ಟಗಳನ್ನು ಪ್ರತಿನಿಧಿಸುತ್ತವೆ. ಜೀವನದಲ್ಲಿ ಎದುರಾದ ಪರಿಸ್ಥಿತಿಗಳಿಗೆ ಆಯಾ ಪಾತ್ರಗಳು ಹೇಗೆ ಪ್ರತಿಕ್ರಿಯಿಸಿ ನಿಭಾಯಿಸುತ್ತವೆ ಎಂಬುವುದರೊಂದಿಗೆ ಚಿತ್ರದ ಕಥೆ ಸಾಗುತ್ತದೆ. ಒಟ್ಟಿನಲ್ಲಿ ಇದು ಪ್ರೀತಿ ಮತ್ತು ಬದುಕಿನ ಕುರಿತ ಸಿನಿಮಾ’ ಎನ್ನುತ್ತಾರೆ ನಿರ್ದೇಶಕರು. ‘ಇದು ಸ್ನೇಹಿತರ ಜೀವನಯಾನದ ಕಥೆ. ನಾನು ಇಲ್ಲಿ ಸೈಂಟಿಸ್ಟ್ ಆಗಬೇಕು ಎಂಬ ಆಸೆ ಇರುವ ಸೈನ್ಸ್ ಸ್ಟುಡೆಂಟ್ ಆಗಿ ಅಭಿನಯಿಸಲಿದ್ದೇನೆ’ ಎಂದು ತಮ್ಮ ಪಾತ್ರದ ಬಗ್ಗೆ ಕಿರುಪರಿಚಯವನ್ನಷ್ಟೇ ನೀಡಿದ್ದಾರೆ ನಟಿ ಐಶಾನಿ ಶೆಟ್ಟಿ.

‘ವಿಶಿಷ್ಟವಾದದ್ದನ್ನು ಮಾಡಬೇಕು ಎಂಬ ಪಾತ್ರವೊಂದರಲ್ಲಿ ನಾನು ನಟಿಸಲಿದ್ದೇನೆ. ಸುತ್ತಲಿನ ಪ್ರಕೃತಿ, ಮಕ್ಕಳು-ಹಿರಿಯರು ಎಲ್ಲರ ಕುರಿತೂ ಕಾಳಜಿ ಇರುವಂಥ ಪಾತ್ರವದು’ ಎಂದು ನಟಿ ಸಂಯುಕ್ತಾ ಹೊರನಾಡು ಹೇಳಿಕೊಂಡಿದ್ದಾರೆ. ಈ ಚಿತ್ರಕ್ಕೆ ರಾಜ್ಯೋತ್ಸವದಂದು ಮುಹೂರ್ತ ನಡೆಯಲಿದ್ದು, ನ. 18ರಿಂದ ಚಿತ್ರೀಕರಣ ಆರಂಭವಾಗಲಿದೆ. 




మరింత సమాచారం తెలుసుకోండి: