ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭನಯದ ಆಯುಷ್ಮಾನ್ ಭವ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್ ಆಗಿದ್ದು, ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ.  ನವೆಂಬರ್ 1ರಂದೇ ತೆರೆಕಾಣಬೇಕಿದ್ದ ಚಿತ್ರ ತಾಂತ್ರಿಕ ಸಮಸ್ಯೆಯಿಂದಾಗಿ ಮುಂದೂಡಲಾಗಿತ್ತು. ಇದೀಗ ಎಲ್ಲವು ಸರಿ ಹೋಗಿದೆ. ಅಷ್ಟಕ್ಕೂ ರಿಲೀಸ್ ಡೇಟ್ ಇದೆ ನೋಡಿ.


ಆಯುಷ್ಮಾನ್​ಭವ ಸಿನಿಮಾ ರಿಲೀಸ್ ಆಗುತ್ತಿರುವುದು ನ. 15ರಂದು. ವಿಶೇಷತೆ ಎಂದರೆ ಇದೇ ದಿನಾಂಕದಂದು ತೆರೆಕಂಡಿದ್ದ ಶಿವರಾಜ್​ಕುಮಾರ್ ​ಗೆ ದೊಡ್ಡ ಬ್ರೇಕ್ ನೀಡಿದ್ದ ಜನುಮದ ಜೋಡಿ ಸಿನಿಮಾ ಕೂಡ ರಿಲೀಸ್ ಆಗಿತ್ತು ಎಂಬುದು ವಿಶೇಷ. 1996ರ ನ. 15ರಂದು ಜನುಮದ ಜೋಡಿ ತೆರೆಕಂಡಿತ್ತು. ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಕೈಲೀಗ ಸಾಲು ಸಾಲು ಸಿನಿಮಾಗಳು. 'ದಿ ವಿಲನ್' ಯಶಸ್ಸಿನ ನಂತರ ತೆರೆಕಂಡ 'ಕವಚ' ಮತ್ತು 'ರುಸ್ತುಂ' ಸಿನಿಮಾಗಳು ಅಷ್ಟೇನೂ ಸದ್ದು ಮಾಡಲಿಲ್ಲ. ಆದರೂ ಶಿವಣ್ಣನ ಕೈಯಲ್ಲಿ ಈಗ 5 ಸಿನಿಮಾಗಳಿವೆ. ಪಿ. ವಾಸು ನಿರ್ದೇಶಿಸಿರುವ 'ಆಯುಷ್ಮಾನ್​ಭವ' ಮುಂದಿನ ವಾರ ತೆರೆಗೆ ಅಪ್ಪಳಿಸಲಿದೆ. 

ಶಿವರಾಜ್​ಕುಮಾರ್ ಜೊತೆಗೆ ರಚಿತಾ ರಾಮ್ ನಾಯಕಿಯಾಗಿ ನಟಿಸುತ್ತಿರುವ 'ಆಯುಷ್ಮಾನ್​ಭವ' ಸಿನಿಮಾ ಕಳೆದ ವಾರವೇ ತೆರೆಕಾಣಬೇಕಿತ್ತು. ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವದಂದೇ ಈ ಸಿನಿಮಾವನ್ನು ತೆರೆಗೆ ತರಲಾಗುವುದು ಎಂದು ಚಿತ್ರತಂಡ ಆರಂಭದಲ್ಲಿ ಹೇಳಿತ್ತು. ಆದರೆ, ಕಾರಣಾಂತರ ಗಳಿಂದ ಚಿತ್ರ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿತ್ತು. ಇದೀಗ ಸಿನಿಮಾದ ಬಿಡುಗಡೆಯ ದಿನಾಂಕವನ್ನು 'ಆಯುಷ್ಮಾನ್​ಭವ' ಚಿತ್ರತಂಡ ಘೋಷಿಸಿದೆ. ಅನಂತ್​ನಾಗ್, ಸಾಧುಕೋಕಿಲ, ಸುಹಾಸಿನಿ, ರಂಗಾಯಣ ರಘು, ನಿಧಿ ಸುಬ್ಬಯ್ಯ, ಅವಿನಾಶ್, ರಾಜೇಶ್ ನಟರಂಗ ಮುಂತಾದ ಕಲಾವಿದರು ನಟಿಸಿರುವ 'ಆಯುಷ್ಮಾನ್​ಭವ' ಟ್ರೈಲರ್ ಮೆಚ್ಚುಗೆ ಗಳಿಸಿತ್ತು. 'ಆಪ್ತಮಿತ್ರ', 'ಆಪ್ತರಕ್ಷಕ', 'ದೃಶ್ಯ', 'ಶಿವಲಿಂಗ' ಮುಂತಾದ ಸಸ್ಪೆನ್ಸ್​ ಸಿನಿಮಾಗಳನ್ನು ಕನ್ನಡಕ್ಕೆ ನೀಡಿರುವ ಪಿ. ವಾಸು 'ಶಿವಲಿಂಗ' ಸಿನಿಮಾ ಬಳಿಕ ಮತ್ತೊಮ್ಮೆ ಶಿವರಾಜ್​ಕುಮಾರ್​ಗೆ ಆ್ಯಕ್ಷನ್- ಕಟ್ ಹೇಳಿದ್ದಾರೆ. ಚಿತ್ರ ಅದ್ದೂರಿಯಾಗಿ ಹಿಟ್ ಪಡೆಯಲಿದೆ ಎಂಬುದು ನಿರ್ದೇಶಕರ ಮಾತಾಗಿದೆ.


మరింత సమాచారం తెలుసుకోండి: