ಸ್ಯಾಂಡಲ್ ವುಡ್ ಸಿನಿ ಇಂಡಸ್ಟ್ರಿಯಲ್ಲಿ ಇದೊಂದು ನೂತನ ಪ್ರಯೋಗ. ಸಿನಿ ಪ್ರಿಯರು ಒಂದು ಸಿನಿಮಾದಲ್ಲಿ ಏನೆಲ್ಲಾ ಬಯಸುತ್ತಾರೋ ಬಹುತೇಕ ಅದೆಲ್ಲಾ ಈ ಸಿನಿಮಾದಲ್ಲಿ ಅವರು ನೋಡಬಹುದು.  ಒಂದೇ ಸಿನಿಮಾದಲ್ಲಿ ಏಳು ವಿಭಿನ್ನ ಕಥೆಯನ್ನ ಪ್ರೇಕ್ಷಕರಿಗೆ ಇಷ್ಟವಾಗುವಂತೆ ಕಟ್ಟಿಕೊಡುವ ಪ್ರಯತ್ನ ಮಾಡೋದು ಅಂದ್ರೆ ಅದು ಇನ್ನೂ ದೊಡ್ಡ ಸವಾಲಿನ ಕೆಲಸ.
 
ಈ ವಾರ ತೆರೆಗೆ ಬಂದಿರುವ “ಕಥಾ ಸಂಗಮ‘, ಇಂಥ ಪ್ರಯತ್ನದ ಮೂಲಕ ಗಮನ ಸೆಳೆದಿದ್ದ ಚಿತ್ರ. ಕೌಟುಂಬಿಕ ಬಂಧನ, ಕೆಲಸದಲ್ಲಿ ಕಳೆದು ಹೋದ ವ್ಯಕ್ತಿತ್ವ, ಪ್ರೀತಿಯೆಂಬ ಮಾಯೆಯಲ್ಲಿ ಹೊಯ್ದಾಟ, ವೃತ್ತಿ ನಿಷ್ಠೆ, ತರ್ಕಕ್ಕೆ ನಿಲುಕದ ಒಳ–ಹೊರ ನೋಟ, ಪ್ರಶ್ನಾರ್ಥಕವಾಗಿ ಉಳಿಯುವ ಗುಣ–ರೂಪಗಳ ತಲ್ಲಣ, ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವ ಜೀವನ ಈ ಎಲ್ಲದರ ಸಂಗಮವನ್ನು “ಕಥಾ ಸಂಗಮದಲ್ಲಿ‘ ಕಾಣಬಹುದು. 
 
ಪ್ರತಿಯೊಂದು ಕಥೆಯು, ಒಂದೊಂದು ಸಂಚಿಕೆಯಂತೆ ತೆರೆಮೇಲೆ ತೆರೆದುಕೊಳ್ಳುವುದರಿಂದ, ಪ್ರೇಕ್ಷಕರು ಕೂಡ ಒಂದೇ ಸಿನಿಮಾದಲ್ಲಿ ಲವ್‌, ಎಮೋಶನ್‌, ಸಸ್ಪೆನ್ಸ್‌, ಥ್ರಿಲ್ಲರ್‌, ಸೆಂಟಿಮೆಂಟ್‌ ಹೀಗೆ ಎಲ್ಲ ಶೈಲಿಯ ಕಥೆಗಳನ್ನು ನೋಡಬಹುದು. 
ಇನ್ನು ಏಳು ವಿಭಿನ್ನ ಕಥೆಗಳಲ್ಲೂ ಬೇರೆ ಬೇರೆ ಕಲಾವಿದರು ಚಿತ್ರದ ಪಾತ್ರಗಳಿಗೆ ಬಣ್ಣ ಹಚ್ಚಿರುವುದರಿಂದ, ಪ್ರತಿ ಕಥೆಯಲ್ಲೂ ಕಲಾವಿದರು, ನಿರ್ದೇಶಕರು ಮತ್ತು ತಂತ್ರಜ್ಞರ ತಂಡ ಬದಲಾಗುತ್ತದೆ. ಹಾಗಾಗಿ ತೆರೆಮೇಲೆ ಕೂಡ ಕಲಾವಿದರ ದೊಡ್ಡ ದಂಡೇ ಕಾಣಬಹುದು. ಕಿಶೊರ್‌, ಯಜ್ಞಾ ಶೆಟ್ಟಿ, ರಾಜ್‌ ಬಿ. ಶೆಟ್ಟಿ, ರಿಷಭ್‌ ಶೆಟ್ಟಿ, ಹರಿಪ್ರಿಯಾ, ಅಮೃತ ನಾಯಕ್‌, ಬಾಲಾಜಿ ಮನೋಹರ್‌, ಪ್ರಕಾಶ್‌ ಬೆಳವಾಡಿ, ಸೌಮ್ಯ, ಜಗನ್‌ ಮೂರ್ತಿ, ಪ್ರಮೋದ್‌ ಶೆಟ್ಟಿ, ವಾಸು ದೀಕ್ಷಿತ್‌ ಮೊದಲಾದ ಬಹುತೇಕ ಕಲಾವಿದರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
 
ಮೊದಲೇ ಹೇಳಿದಂತೆ, ಏಳು ಕಥೆಗಳ ಸಂಗಮವಾಗಿರುವ ಈ ಚಿತ್ರವನ್ನು ಏಳು ಜನ ನಿರ್ದೇಶಕರು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಏಳು ಸಂಗೀತ ನಿರ್ದೇಶಕರು, ಏಳು ಛಾಯಾಗ್ರಹಕರು ಸೇರಿದಂತೆ ಏಳು ತಂಡವಾಗಿ ಕೆಲಸ ಮಾಡಿದ್ದಾರೆ.ಆದರೆ ಕೆಲವು ಸಂಚಿಕೆಗಳಲ್ಲಿ ಚಿತ್ರದ ಛಾಯಾಗ್ರಹಣ, ಲೈಟಿಂಗ್‌, ಹಿನ್ನೆಲೆ ಸಂಗೀತ, ಶಬ್ದ ಗ್ರಹಣ ಮತ್ತಿತರ ತಾಂತ್ರಿಕ ಕಾರ್ಯಗಳಿಗೆ ಆ ಸಂಚಿಕೆಯ ನಿರ್ದೇಶಕರು ಇನ್ನಷ್ಟು ಗಮನಹರಿಸಬಹುದಿತ್ತು.

మరింత సమాచారం తెలుసుకోండి: