ಬೆಂಗಳೂರು: 12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಫೆಬ್ರವರಿ 26ರಿಂದ ಮಾ. 4ರವರೆಗೆ ನಡೆಯಲಿದ್ದು, ಆಸ್ಕರ್ ಪ್ರಶಸ್ತಿ ಪಡೆದ ಪ್ಯಾರಸೈಟ್ ಸೇರಿ 60ದೇಶಗಳ 225 ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ಇದಕ್ಕೀಗ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು ವಿಶ್ವದ ವಿವಿಧೆಡೆಯಿಂದ ಲಕ್ಷಾಂತರ ಮಂದಿ ಭಾಗಿಯಾಗುವ ನಿರೀಕ್ಷೆ ಮಾಡಲಾಗಿದೆ. 
 
ರಾಜ್ಯದಲ್ಲಿ 13 ದಿನಗಳ ಚಿತ್ರೋತ್ಸವದಲ್ಲಿ 60 ದೇಶಗಳ 225 ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ಅದರಲ್ಲಿ ಆಸ್ಕರ್ ವಿಜೇತ ಚಲನಚಿತ್ರ ಪ್ಯಾರಸೈಟ್ ಸೇರಿ ಕಾನ್, ಬರ್ಲಿನ್, ವೆನಿಸ್, ಟೊರೆಂಟೋ, ಗೋವಾ, ಮುಂಬೈ ಮತ್ತು ಕೇರಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಚಲನಚಿತ್ರಗಳು ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿವೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ತಿಳಿಸಿದ್ದಾರೆ. 
 
ಫೆಬ್ರವರಿ 26 ರಂದು ಸಂಜೆ 6 ಗಂಟೆಗೆ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಈ ವೇಳೆ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಡಿ.ವಿ.ಸದಾನಂದಗೌಡ, ಉಪಮುಖ್ಯಮಂತ್ರಿಗಳಾದ ಗೋವಿಂದ ಎಂ.ಕಾರಜೋಳ, ಡಾ.ಸಿ.ಎನ್.ಅಶ್ವತ್ಥನಾರಾಯಣ್, ಲಕ್ಷ್ಮಣ ಸವದಿ ಉಪಸ್ಥಿತರಿರಲಿದ್ದಾರೆ. ಅವರ ಜತೆಗೆ ಚಲನಚಿತ್ರ ನಟ ಯಶ್, ನಟಿ ಜಯಪ್ರದ ಇತರರು ಪಾಲ್ಗೊಳ್ಳಲಿದ್ದಾರೆ ಎಂಬುದು ತಿಳಿದುಬಂದಿದೆ.
 
ಪಾಸ್ ಪಡೆಯಲು ನಂದಿನಿ ಲೇಔಟ್ ​ನಲ್ಲಿರುವ ಚಲನಚಿತ್ರೋತ್ಸವ ಕಚೇರಿಯಲ್ಲಿ ಫೆ. 26ರವರೆಗೆ ಪಾಸ್ ಪಡೆಯಬಹುದು ಹಿರಿಯರಿಗೆ 800 ರೂ. ಮತ್ತು ವಿದ್ಯಾರ್ಥಿಗಳು, ಫಿಲಂ ಸೊಸೈಟಿ ಸದಸ್ಯರು ಮತ್ತು ವಾಣಿಜ್ಯ ಮಂಡಳಿ ಸದಸ್ಯರಿಗೆ 400 ರೂ. ಶುಲ್ಕ ನಿಗದಿ ಹೆಚ್ಚಿನ ಮಾಹಿತಿಗೆ www.biffes.in ಭೇಟಿ ನೀಡಬಹುದು. 
 
ಉದ್ಘಾಟನಾ ಚಿತ್ರವಾಗಿ ಇರಾನಿ ಚಲನಚಿತ್ರ ‘ಖಾರ್’ ಪ್ರದರ್ಶನಗೊಳ್ಳಲಿದೆ. ಅದೇ ರೀತಿ ಮಾ.4ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ ನಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಮುಕ್ತಾಯ ಚಿತ್ರವಾಗಿ ಇಸ್ರೇಲಿನ ಇವೆಗಿನಿ ರುಮಾನ್ ನಿರ್ದೇಶನದ ‘ಗೋಲ್ಡನ್ ವಾಯ್ಸ್' ಚಲನಚಿತ್ರ ಪ್ರದರ್ಶನಗೊಳ್ಳಲಿದೆ. ವಿಶ್ವ ಚಲನಚಿತ್ರಕ್ಕೆ 125 ವರ್ಷ ಸಂದಿರುವ ಹಿನ್ನೆಲೆಯಲ್ಲಿ ಕಳೆದ 12 ದಶಕಗಳಲ್ಲಿ ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ಪ್ರತಿ ದಶಕದಿಂದ ಒಂದೊಂದು ಚಲನಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ. ವಿಶ್ವ ಕ್ಲಾಸಿಕ್ ಚಲನಚಿತ್ರಗಳು ನೋಡುಗರಿಗೆ ಅಚ್ಚರಿಯನ್ನುಂಟು ಮಾಡಲಿವೆ ಎಂದು ಪುರಾಣಿಕ್ ವಿವರಿಸಿದ್ದಾರೆ.
 

మరింత సమాచారం తెలుసుకోండి: