ಬಿಗ್‌ ಬಾಸ್ ಸೀಸನ್ 7ರ ವಿನ್ನರ್ ‘ಶೈನ್’ ಶೆಟ್ಟಿ: 61ಲಕ್ಷ ರೂ. ನಗದು, ಟಾಟಾ ಅಲ್‌ ಟ್ರೋಜ್​ ಕಾರು ಗಿಫ್ಟ್
 
ಬೆಂಗಳೂರು: ನೂರ ಹದಿಮೂರು ದಿನಗಳ ಕಾಲ ಪ್ರೇಕ್ಷಕರ ಕುತೂಹಲ ಉಳಿಸಿಕೊಂಡೇ ಬಂದಿದ್ದ “ಬಿಗ್​ ಬಾಸ್​ ಕನ್ನಡ ಸೀಸನ್​ 7ರ ಗ್ರ್ಯಾಂಡ್​ ಫಿನಾಲೆಯಲ್ಲಿ ವಿಜೇತರಾಗಿ ನಟ ಶೈನ್ ಶೆಟ್ಟಿ ಶೈನ್ ಆಗಿದ್ದಾರೆ. ಅವರಿಗೆ ಪ್ರಬಲ ಸ್ಪಧಿಯಾಗಿದ್ದವರ ಪೈಕಿ ಕುರಿ ಪ್ರತಾಪ್ ಮೊದಲನೇ ಹಾಗೂ ವಾಸುಕೀ ವೈಭವ್ ಎರಡನೇ ರನ್ನರ್​ ಅಪ್​ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ. 
 
ಬಿಗ್ ಬಾಸ್ 7ರ ಗ್ರ್ಯಾಂಡ್ ಫಿನಾಲೆಯ ವಿಜೇತರಾಗುವ ಮೂಲಕ ಶೈನ್ ಶೆಟ್ಟಿ ಬಹುಮಾನದ 50ಲಕ್ಷ ರೂ. ಸೇರಿ ಒಟ್ಟು 61ಲಕ್ಷ ರೂ. ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ, ಅವರಿಗೆ ಹೊಚ್ಚ ಹೊಸ ಮಾಡೆಲ್‌ನ ಟಾಟಾ ಅಲ್‌ ಟ್ರೋಜ್​ ಕಾರು ಕೂಡ ಕೊಡುಗೆಯಾಗಿ ಸಿಕ್ಕಿದೆ. ಶೈನ್​ ಶೆಟ್ಟಿ, ವಾಸುಕೀ ವೈಭವ್​, ಕುರಿ ಪ್ರತಾಪ್​, ದೀಪಿಕಾ ದಾಸ್​, ಭೂಮಿ ಶೆಟ್ಟಿ ಅವರಿದ್ದರು.ದೀಪಿಕಾ ದಾಸ್​ ಮತ್ತು ಭೂಮಿ ಶೆಟ್ಟಿ ಎಲಿಮಿನೇಟ್​ ಆಗಿದ್ದರು. ಹೀಗಾಗಿ ಭಾನುವಾರ ಗ್ರ್ಯಾಂಡ್ ಫಿನಾಲೆಯಲ್ಲಿ ಶೈನ್ ಶೆಟ್ಟಿ, ವಾಸುಕೀ ವೈಭವ್, ಕುರಿ ಪ್ರತಾಪ್ ಸ್ಪರ್ಧಿಗಳಾಗಿದ್ದರು.
 
ಗ್ರ್ಯಾಂಡ್ ಫಿನಾಲೆಯ ಬಹಳ ಕೌತುಕದ ಹಂತದಲ್ಲೇ ಮೊದಲಿಗೆ ಗಾಯಕ, ಸಂಗೀತ ನಿರ್ದೇಶಕ ವಾಸುಕೀ ವೈಭವ್ ಔಟ್ ಆಗಿದ್ದರಿಂದ, ಎರಡನೇ ರನ್ನರ್ ಅಪ್ ಎನಿಸಿಕೊಂಡರು. ಬಳಿಕ ಶೈನ್ ಶೆಟ್ಟಿ ಹಾಗೂ ಕುರಿ ಪ್ರತಾಪ್ ಪೈಕಿ ಶೈನ್ ಮೇಲುಗೈ ಸಾಧಿಸಿದ್ದರಿಂದ ಅವರು ‘ಬಿಗ್‌ ಬಾಸ್ ಕನ್ನಡ ಸೀಸನ್ 7’ರ ವಿಜೇತರಾಗಿ, ಗೆಲುವಿನ ನಗೆ ಬೀರಿದ್ದಾರೆ. 
 
ಕುಂದಾಪುರದ ಹುಡುಗ ಶೈನ್ ಶೆಟ್ಟಿ:
ಬಿಗ್‌ಬಾಸ್ ಕನ್ನಡ ಸೀಸನ್ 7ರ ವಿಜೇತ ಶೈನ್ ಶೆಟ್ಟಿ ಮೂಲತಃ ಕುಂದಾಪುರದವರು. ಬಳಿಕ ಬೆಂಗಳೂರಿಗೆ ಬಂದ ಇವರು ‘ಲಕ್ಷ್ಮೀ ಬಾರಮ್ಮ ಮೀರಾ ಮಾಧವ’ ಧಾರಾವಾಹಿ ಹಾಗೂ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಚಿತ್ರರಂಗದಲ್ಲಿ ಮಿಂಚಬೇಕು ಎಂಬ ಮಹದಾಸೆ ಹೊಂದಿರುವ ಇವರಿಗೆ ಅದೃಷ್ಟ ಸಹಕರಿಸದ್ದರಿಂದ ಅನಿವಾರ್ಯವಾಗಿ ಹೊಟೇಲ್ ಉದ್ಯಮದತ್ತ ಹೊರಳಬೇಕಾಯಿತು‌. ‘ಗಲ್ಲಿ ಕಿಚನ್’ ಎಂಬ ಫುಡ್ ಟ್ರಕ್ ಆರಂಭಿಸಿ ಜೀವನ ಸಾಗಿಸುತ್ತಿರುವಾಗ ಇವರಿಗೆ ‘ಬಿಗ್‌ಬಾಸ್’ ಸ್ಪರ್ಧಿ ಆಗುವ ಅವಕಾಶ ಒದಗಿ ಬಂದಿತ್ತು.

మరింత సమాచారం తెలుసుకోండి: