ನವದೆಹಲಿ: ಭಾರತೀಯ ಜನತಾ ಪಕ್ಷಕ್ಕೆ ರಾಷ್ಟ್ರ ಮಟ್ಟದಲ್ಲಿ ಭಾರೀ ಮುಜುಗರ ತರಿಸಬಹುದಾಗಿದ್ದ ಆಡಿಯೋ ಬಾಂಬ್ ಸುಪ್ರೀಂ ಕೋರ್ಟಿನಲ್ಲಿಂದು ಠುಸ್ ಪಟಾಕಿಯಾಗಿದೆ. ಅನರ್ಹ ಶಾಸಕರ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಆಡಿರುವ ಮಾತುಗಳನ್ನು ಪರಿಗಣಿಸಲಾಗುವುದು. ಆದರೆ ಅದರಲ್ಲಿರುವ ಅಂಶಗಳ ಮೇಲೆ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಪಪಡಿಸಿದೆ.
ಇಂದು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಎನ್.ವಿ.ರಮಣ ಅವರ ಪೀಠದ ಮುಂದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಡಿಯೋ ಪ್ರಕರಣದ ವಾದ-ಪ್ರತಿವಾದ ನಡೆಯಿತು. ಕಾಂಗ್ರೆಸ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ಹಿಂದಿನ ಜೆಡಿಎಸ್  ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನಗೊಳಿಸಲು ಬಿಜೆಪಿ ಯೋಜನೆ ರೂಪಿಸಿತ್ತು. ಬಿಜೆಪಿ ರಾಷ್ಟ್ರಿಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಖುದ್ದಾಗಿ ಉಸ್ತುವಾರಿ ವಹಿಸಿಕೊಂಡು 17 ಮಂದಿ ಶಾಸಕರ ರಾಜೀನಾಮೆಗೆ ಕಾರಣರಾದರು. ಎರಡೂವರೆ ತಿಂಗಳ ಕಾಲ 17 ಮಂದಿ ಶಾಸಕರನ್ನು ಮುಂಬೈನಲ್ಲಿಟ್ಟಿದ್ದರು. ಹೀಗಾಗಿ ಇದು ವ್ಯವಸ್ಥಿತ ಷಡ್ಯಂತ್ರವಾಗಿದ್ದು, ಪಕ್ಷಾಂತರ ನಿಷೇಧ ಕಾಯ್ದೆ ವ್ಯಾಪ್ತಿಯಲ್ಲಿ ಒಳಪಡುತ್ತದೆ.
ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿದ ಕೇಂದ್ರ ಗೃಹ ಸಚಿವರು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಖುದ್ದಾಗಿ ಯಡಿಯೂರಪ್ಪ ಅವರೇ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ 17 ಮಂದಿ ಶಾಸಕರ ರಾಜೀನಾಮೆ ಕುರಿತು ಹೇಳಿಕೆ ನೀಡಿದ್ದಾರೆ ಎಂದು ಕಪಿಲ್ ಸಿಬಲ್ ಹೇಳಿದಾಗ, ನೀವು ಸಲ್ಲಿಸಿರುವ ಸಿಡಿಯಲ್ಲಿ ಯಡಿಯೂರಪ್ಪ ಅವರು ಏನು ಹೇಳಿದ್ದಾರೆ? ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು. 
ಅನರ್ಹ ಶಾಸಕರ ಪರವಾಗಿ ವಾದ ಮಂಡಿಸಿದ ವಕೀಲ ಸುಂದರಂ, ಈ ಪ್ರಕರಣದಲ್ಲಿ ಯಡಿಯೂರಪ್ಪ ಅವರು ವಾದಿ ಅಥವಾ ಪ್ರತಿವಾದಿಯಾಗಿಲ್ಲ. ಅವರಿಗೂ ಪ್ರಕರಣಕ್ಕೂ ಸಂಬಂಧವಿಲ್ಲ. ಸಂಬಂಧವಿಲ್ಲದ ವ್ಯಕ್ತಿಗಳು ಸಾರ್ವಜನಿಕರ ವೇದಿಕೆಯಲ್ಲಿ ಆಡಿದ ಮಾತುಗಳನ್ನು ಸಾಕ್ಷ್ಯಗಳೆಂದು ಪರಿಗಣಿಸಲಾಗುವುದಿಲ್ಲ. ಮೇಲಾಗಿ ವಕೀಲರು ಸಲ್ಲಿಸಿರುವ ಆಡಿಯೋಗೆ ಎವಿಡೆನ್ಸ್ ಆಕ್ಟ್ ೬೫(ಬಿ) ಅನುಸಾರ ಯಾವುದೇ ದೃಢೀಕರಣ ಇಲ್ಲ. ಹೀಗಾಗಿ ಆಡಿಯೋವನ್ನು ಪರಿಗಣಿಸಬಾರದು ಎಂದು ವಾದಿಸಿದರು. 


మరింత సమాచారం తెలుసుకోండి: