ಮುಂಬೈ: ತಂದೆಗೆ ಕೊಟ್ಟ ಮಾತನ್ನು ನೆರವೇರಿಸಿಯೇ ತೀರುತ್ತೇನೆ. ಮಹಾರಾಷ್ಟ್ರದಲ್ಲಿ ಶಿವಸೇನಾ ಮುಖ್ಯಮಂತ್ರಿ ಇರುತ್ತಾರೆಂದು ನಾನು ನಮ್ಮ ತಂದೆ ಬಾಳಾಸಾಹೇಬ್​ ಠಾಕ್ರೆ ಅವರಿಗೆ ಮಾತು ಕೊಟ್ಟಿದ್ದೆ. ಆ ಭರವಸೆಯನ್ನು ನಾನು ಈಡೇರಿಸುತ್ತೇನೆ. ಅದಕ್ಕಾಗಿ ಕೇಂದ್ರ ಗೃಹ ಸಚಿವರಾದ ಅಮಿತ್​ ಷಾ ಹಾಗೂ ದೇವೇಂದ್ರ ಫಡ್ನಾವಿಸ್​ ಅವರ ಸಹಾಯ ಬೇಕಿಲ್ಲ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್​ ಠಾಕ್ರೆ ಬಿಜೆಪಿ ವಿರುದ್ಧ ಗುಡುಗಿದ್ದಾರೆ. 


ದೇವೇಂದ್ರ ಫಡ್ನಾವಿಸ್​ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಸುದ್ದಿಗೋಷ್ಠಿಯಲ್ಲಿ ಶಿವಸೇನಾ ವಿರುದ್ಧ ಅಸಮಾಧಾನ ಹೊರಹಾಕಿದ ಬೆನ್ನಲ್ಲೇ ಉದ್ಧವ್​ ಠಾಕ್ರೆ ಶುಕ್ರವಾರ ಸಂಜೆ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಮೈತ್ರಿ ನೋ ಎಂದಿದ್ದಾರೆ. ದುಃಖಕರ ಸಂಗತಿಯೆಂದರೆ ಗಂಗಾ ಶುದ್ಧೀಕರಣ ಮಾಡುವಾಗ ಅವರ ಮನಸ್ಸು ಕಲುಷಿತಗೊಂಡಿದೆ. ಸರಿಯಿಲ್ಲದ ಜನರೊಂದಿಗೆ ನಾವು ಮೈತ್ರಿ ಮಾಡಿಕೊಂಡಿದ್ದು ಕೆಟ್ಟ ನಿರ್ಣಯ ಎಂದು ಈಗ ನನಗನಿಸುತ್ತಿದೆ. ನಮ್ಮೊಂದಿಗೆ ಚರ್ಚಿಸಲು ಬರುವವರಿಗೆ ಎಂದಿಗೂ ಬಾಗಿಲು ಮುಚ್ಚಿಲ್ಲ. ನಮಗೆ ಸುಳ್ಳು ಹೇಳಿದ್ದರಿಂದ ನಾವು ಅವರೊಂದಿಗೆ ಮಾತನಾಡುತ್ತಿಲ್ಲ. ಈವರೆಗೂ ನಾವು ಎನ್.​ಸಿ.ಪಿಯೊಂದಿಗೆ ಚರ್ಚೆ ನಡೆಸಿಲ್ಲ ಎಂದು ತಿಳಿಸಿದರು.


ಫಡ್ನಾವಿಸ್ ನಾನು ಮಿಥ್ಯೆ ಹೇಳುತಿದ್ದೇನೆ ಎಂದಿದ್ದಾರೆ. ಅದು ಸತ್ಯಕ್ಕೆ ದೂರವಾದ ಮಾತು. ನಾನು ನೇರವಾಗಿ ಸ್ಪಷ್ಟವಾಗಿಯೇ ಹೇಳುತ್ತೇನೆ. ಫಡ್ನಾವಿಸ್ ಗೆ ಸಿಎಂ ಖುರ್ಚಿಯ ಬಗ್ಗೆಯೇ ಮಾತನಾಡಿದ್ದರು. ಇದೇ ವೇಳೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸಲು ಕುದುರೆ ವ್ಯಾಪಾರ ಮಾಡಿದೆ ಎಂದು ಆರೋಪಿಸಿದರು. ಅಲ್ಲದೆ, ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡುವಂತೆ ಬಿಜೆಪಿಗೆ ಸವಾಲು ಹಾಕಿದರು.


ಇದಕ್ಕೂ ಮುನ್ನ ರಾಜೀನಾಮೆ ಸಲ್ಲಿಸಿ, ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿದಿರುವ ದೇವೇಂದ್ರ ಫಡ್ನಾವಿಸ್​,​ ಫಲಿತಾಂಶ ಬಂದ ದಿನ ಸರ್ಕಾರ ರಚನೆಗೆ ಎಲ್ಲ ಅವಕಾಶಗಳೂ ಇವೆ ಎಂದು ಹೇಳಿದ್ದ ಉದ್ಧವ್​ ಜಿ ದುರದೃಷ್ಟವಶಾತ್ ಅದನ್ನು ಮುರಿದು ಹಾಕಿದ್ರು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಪ್ರಸ್ತುತ ಮಹಾರಾಷ್ಟ್ರದ ರಾಜಕೀಯ ಸನ್ನಿವೇಶ ಈಗಿದ್ದು , ಸರ್ಕಾರ ಯಾರು ರಚಿಸುತ್ತಾರೆ? ರಾಷ್ಟ್ರಪತಿ ಆಡಳಿತ ಹೇರುತ್ತಾರಾ? ಎಂಬುದು ಕುತೂಹಲಕಾರಿ ಪ್ರಶ್ನೆಯಾಗಿದೆ.


మరింత సమాచారం తెలుసుకోండి: