ಬೆಳಗಾವಿ: ರಾಜ್ಯದಲ್ಲಿ ಉಪಚುನಾವಣೆ ನಡೆದ ಬಳಿಕ ಮತ್ತೇ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ. ಅತ್ತ ದೋಸ್ತಿನೂ ಇಲ್ಲ ಬಿಜೆಪಿ ಸರ್ಕಾರವೂ ಇಲ್ಲದಂತಾಗಲಿದೆ ಎಂದು ಶಾಸಕರೊಬ್ಬರು ತಿಳಿಸಿದ್ದು, ಮುಂದೇನಾಗುತ್ತದೆ ಎಂಬ ಕೂತುಹಲಕಾರಿ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಉಪಚುನಾವಣೆ ಫಲಿತಾಂಶ ಬಂದ ಮೇಲೆ ಮಹಾರಾಷ್ಟ್ರ ರೀತಿಯ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗುತ್ತೆ. ಮತ್ತೆ ಮುಂದಿನ ದಿನಗಳಲ್ಲಿ ಆ ಕಡೆ ಈ ಕಡೆ ಹೋಗುವ ಶಾಸಕರಿಗೆ ಡಿಮ್ಯಾಂಡ್ ಬರಲಿದೆ ಎಂದು ಶಾಸಕ ಸತೀಶ ಜಾರಕಿಹೊಳಿ ಅವರು ಭವಿಷ್ಯ ನುಡಿದಿದ್ದಾರೆ.


 ಉಪಚುನಾವಣೆಯಲ್ಲಿ ಕಾಂಗ್ರೆಸ್ ಹತ್ತು, ಜೆಡಿಎಸ್ ಎರಡು ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿ ರಾಜ್ಯದಲ್ಲಿ ಮತ್ತೆ ಅತಂತ್ರ ಸ್ಥಿತಿ ನಿರ್ಮಾಣವಾಗುತ್ತದೆ ಎಂದರು. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಸರ್ಕಸ್ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್‌ನಿಂದ ಎನ್‌ಸಿಪಿಗೆ ಸರ್ಕಾರ ರಚನೆಗೆ ಬೆಂಬಲ ನೀಡಬಹುದು. ಶಿವಸೇನೆ ಜತೆಗೆ ಬೆಂಬಲ ಅಲ್ಲ. ಬದಲಿಗೆ ಎನ್‌ಸಿಪಿ ಅಂತಾ ಬೆಂಬಲ. ಮಹಾರಾಷ್ಟ್ರದಲ್ಲಿ ಶಿವಸೇನೆ ಗಟ್ಟಿರುವುದಕ್ಕೆ ಆಪರೇಷನ್ ಕಮಲ ಮಾಡುತ್ತಿಲ್ಲ. ಪಕ್ಷೇತರರು ಹೋದರೂ ಸಂಖ್ಯೆ ಕಡಿಮೆ ಆಗಿದ್ದಕ್ಕೆ ಆಪರೇಷನ್ ಕಮಲ ಸಾಹಸಕ್ಕೆ ಬಿಜೆಪಿ ಕೈ ಹಾಕುತ್ತಿಲ್ಲ ಎಂದು ಮಹಾರಾಷ್ಟ್ರ ರಾಜಕೀಯದ ಬಗ್ಗೆ ವಿವರಿಸಿದರು. 


ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪ್ರಧಾನಿ ಮೋದಿಯವರೇ ನನ್ನ ಐದು ವರ್ಷ ಹಾಳು ಮಾಡಿದ್ದೀರಿ ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ. ಮುಂದಿನ ಐದು ವರ್ಷ ಹಾಳು ಮಾಡಬೇಡಿ ಅಂದಿದ್ದಾರೆ. ಮೋದಿಯವರೇ ನಾನು ಕೆಲಸ ಮಾಡಿಲ್ಲ ಎಂದು ಹೇಳಿದ್ದಾರೆ. ಮೋದಿ ವಿದೇಶದಲ್ಲಿ ಜಾಸ್ತಿ ಓಡಾಡಿದ್ದಕ್ಕೆ ಅಧಿಕಾರಿಗಳು ತಮಗೆ ತಿಳಿದಿದ್ದನ್ನು ಮಾಡಿದ್ದಾರೆ ಎಂದು ಗುಡುಗಿದ್ದಾರೆ. 


ಉಪಚುನಾವಣೆಯಲ್ಲಿ ಸಹೋದರ ಲಖನ್ ಗೆಲುವಿಗೆ ಶ್ರಮಿಸುತ್ತಿರುವ ಸತೀಶ್, ಕಳೆದ ನಾಲ್ಕು ತಿಂಗಳಿನಿಂದ ಗೋಕಾಕ್ ಕ್ಷೇತ್ರದಲ್ಲಿಯೇ ಬೀಡು ಬಿಟ್ಟಿದ್ದಾರೆ. ಈ ಕ್ಷೇತ್ರದ ಪ್ರತಿ ಹಳ್ಳಿಗೂ ಭೇಟಿ ನೀಡಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಇವರ ಈ ಸಕ್ರಿಯತೆಗೆ ಕುರಿತು ಇಲ್ಲಸಲ್ಲದ ಸುದ್ದಿ ಹಬ್ಬಿಸುತ್ತಿರುವ ಕೆಲವರು, 2023ರ ಚುನಾವಣೆಗೆ ಸತೀಶ್ ಕ್ಷೇತ್ರ ಬದಲಿಸಿ ಗೋಕಾಕ್‌ನಿಂದ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.


మరింత సమాచారం తెలుసుకోండి: