ಬೆಂಗಳೂರು: ರಾಜ್ಯ ಸರ್ಕಾರದ ಪ್ರಭಾವಿ ಸಚಿವರಾದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ವೀರಶೈವರ ಮತ ಕೇಳುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸುವ ಮೂಲಕ ನೀತಿಸಂಹಿತೆ ಉಲ್ಲಂಘಿಸಿದ್ದಾರೆ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಆಗ್ರಹಿಸಿದ್ದಾರೆ. 
 
ಇನ್ನೋರ್ವ ಸಚಿವ ಕೆ.ಎಸ್.ಈಶ್ವರಪ್ಪ ನಟಿ ಐಶ್ವರ್ಯ ರೈ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಮಹಿಳೆಯರಿಗೆ ಅವಮಾನ ಮಾಡಿರುವುದರಿಂದ ಇಬ್ಬರೂ ಸಚಿವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಆಗ್ರಹಿಸಿದ್ದು ಭಾರೀ ಸುದ್ದಿಯಾಗಿದೆ. 
.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರಾದ ಮಾಧುಸ್ವಾಮಿ ಮತ್ತು ಕೆ. ಎಸ್ ಈಶ್ವರಪ್ಪ ಅವರು ಸಚಿವ ಸಂಪುಟದಲ್ಲಿ ಮುಂದುವರೆಯಲು ಅರ್ಹರಲ್ಲ ಎಂದು ಗುಡುಗಿದ್ದಾರೆ. ಕಾನೂನು ಸಚಿವರಾಗಿ ಮಾಧುಸ್ವಾಮಿ ಜಾತಿ ಹೆಸರಿನಲ್ಲಿ ಮತ ಕೇಳುವುದು ತಪ್ಪಲ್ಲ ಎನ್ನುತ್ತಾರೆ ಎಂದರೆ, ಅವರು ಸಚಿವರಾಗಿ ಮುಂದುವರಿಯಲು ಅರ್ಹರಲ್ಲ. ಜಾತಿ ಆಧಾರದ ಮೇಲೆ ಮತ ಕೇಳಿದ್ದಕ್ಕೆ ಕಾನೂನಿನ ಪ್ರಕಾರ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ಆಗುತ್ತದೆ. ಕಾನೂನು ಸಚಿವರಿಗೆ ಕಾನೂನಿನ ಬಗ್ಗೆ ಅರಿವೇ ಇಲ್ಲ ಎಂದಿದ್ದಾರೆ. 
 
ರಾಜ್ಯದಲ್ಲಿ ಕಾನೂನು ಸಚಿವರಿಗೆ ಕಾನೂನು ಗೊತ್ತಿಲ್ಲ ಇನ್ನು ಕಾನೂನನ್ನು ಹೇಗೆ ಕಾಪಾಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.  ಕಾನೂನು ಸಚಿವರ ಕಾನೂನು ಉಲ್ಲಂಘನೆಯನ್ನು ರಾಜ್ಯಪಾಲರು ಗಮನಿಸಿಯೂ ಇಲ್ಲ, ಚುನಾವಣ ಆಯೋಗ ಜೀವಂತವಾಗಿದ್ದರೆ ಅವರ ವಿರುದ್ಧ ಪ್ರಕರಣ ದಾಖಲಿಸಬೇಕಿತ್ತು ಎಂದು ಕಿಡಿಕಾರಿದ್ದಾರೆ. 
 
ಸಚಿವ ಮಾಧುಸ್ವಾಮಿ ಅವರು ತಮ್ಮ ಹೇಳಿಕೆಗೆ ಜನರಲ್ಲಿ ಕ್ಷಮೆ ಕೇಳಬೇಕು. ಚುನಾವಣಾ ಆಯೋಗ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಮಾಧುಸ್ವಾಮಿಯನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಗುಡುಗಿದ್ದಾರೆ.  ಇನ್ನು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ನಟಿ ಐಶ್ವರ್ಯ ರೈ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿದ್ದಾರೆ. ಐಶ್ವರ್ಯ ರೈ ಗೌರವಸ್ಥ ಮನೆತನದ ಹೆಣ್ಣು ಮಗಳು, ಅವರ ಅತ್ತೆ ಸಂಸತ್‌ ಸದಸ್ಯೆ. ಅವರ ಮಾವ ಅಮಿತಾಭ್‌ ಬಚ್ಚನ್‌ ಸಾಂಸ್ಕೃತಿಕ ರಾಯಭಾರಿ.ಇಂಥ ಗೌರವಸ್ಥ ಕುಟುಂಬದ ಹೆಣ್ಣು ಮಗಳ ಬಗ್ಗೆ ಹಗುರವಾಗಿ ಮಾತನಾಡಿರುವುದು ಮಹಿಳಾ ಸಮೂಹಕ್ಕೆ ಮಾಡಿರುವಅಪಮಾನ ಎಂದಿದ್ದಾರೆ. 

మరింత సమాచారం తెలుసుకోండి: