ಬೆಳಗಾವಿ: ಸಿಎಂ ಬಿಎಸ್‌ ಯಡಿಯೂರಪ್ಪ ಸರಕಾರ ಉಳಿಸಿಕೊಳ್ಳಲು ಕೆಲಸ ಮಾಡುವುದು ಬಿಟ್ಟು ಭಜನೆ ಮಾಡುತ್ತಾ ಕೂತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಗುಡುಗಿದ್ದಾರೆ. 
 
ಬೆಳಗಾವಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದ ಜನರಿಗೆ ಪ್ರವಾಹ ಪರಿಹಾರ ನೀಡಲು ಸರಕಾರ ಮುಂದಾಗುತ್ತಿಲ್ಲ. ಜನರ ಸಮಸ್ಯೆಯ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಸಿಎಂ ಬಿಎಸ್‌ವೈ ಸರಕಾರವನ್ನು ಉಳಿಸಿಕೊಳ್ಳಲು ಭಜನೆ ಮಾಡುತ್ತಾ ಕೂತಿದ್ದಾರೆ ಎಂದು ಕಿಡಿಕಾರಿದ್ದಾರೆ. 
 
ಪ್ರವಾಹದಿಂದ ಜನರು ತತ್ತರಿಸಿದ್ದಾರೆ. ಎರಡು ತಿಂಗಳು ಕಳೆದರೂ ಸಹ ನೆರೆ ಸಂತ್ರಸ್ತರಿಗೆ ಪರಿಹಾರ ತಲುಪುತ್ತಿಲ್ಲ. ಕೇವಲ 3200 ಕೋಟಿ ಯಾವ ಕೆಲಸಕ್ಕೂ ಸಾಲೋದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿ ಕೇಳಿ ಹಣ ಬಿಡುಗಡೆ ಮಾಡಿಸಿ ಎಂದು ಸಂತ್ರಸ್ತರ ಬಗ್ಗೆ ಮಾತನಾಡಿದರು. ಹೀಗಾದರೆ ರಾಜ್ಯದ ಜನರ ಪರಿಸ್ಥಿತಿಗೆ ದೇವರೆ ಗತಿ ಎಂದು ಕಿಡಿಕಾರಿದರು.
 
ಉಪಚುನಾವಣಾ ಫಲಿತಾಂಶದ ಕುರಿತಾಗಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮೀಕ್ಷೆಗಳಲ್ಲಿ ನಂಬಿಕೆ ಇಲ್ಲ. ಮತ ಎಣಿಕೆ ಆಗದೇ ಎಷ್ಟು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ. ಎಣಿಕೆ ನಡೆದ ಮೇಲೆಯೇ ಚುನಾವಣಾ ಫಲಿತಾಂಶದ ಸತ್ಯ ಹೊರಬೀಳಲಿದೆ ಎಂದರು. 
 
ಇದೇ ವೇಳೆ ಉಪಚುನಾವಣಾ ಫಲಿತಾಂಶದ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಕಥೆ ಮುಗಿಯಿತು ಎಂಬ ಬಿಜೆಪಿ ಮುಖಂಡರಾದ ಜಗದೀಶ್ ಶೆಟ್ಟರ್ ಹಾಗೂ ಕೆ.ಎಸ್ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಜಗದೀಶ್ ಶೆಟ್ಟರ್ ಹಾಗೂ ಈಶ್ವರಪ್ಪ ಅವರು ಭ್ರಮೆಯಲ್ಲಿದ್ದಾರೆ.
 
ಕಾಂಗ್ರೆಸ್ ಮುಕ್ತ ಭಾರತ ಬಿಜೆಪಿ ಮುಖಂಡರು ಹೇಳಿಕೆ ನೀಡಿದ್ದರು ಆದರೆ ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ಕಾಂಗ್ರೆಸ್ ಕಥೆ ಏನಾಯಿತು ಎಂಬುವುದೇ ಇದಕ್ಕೆ ಉತ್ತರ. ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಯಾರಿದಂಲೂ ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.ನನ್ನನ್ನು ಕಂಡರೆ ಬಿಜೆಪಿ ಹಾಗೂ ಜೆಡಿಎಸ್‌ಗೆ ಭಯ. ಅದಕ್ಕೆ ನನ್ನ ಹೆಸರು ಪದೇ ಪದೇ ಪ್ರಸ್ತಾಪ ಮಾಡುತ್ತಾರೆ. ಟಿ.ಆರ್.ಪಿ ಜಾಸ್ತಿ ಎಂಬ ಕಾರಣಕ್ಕಾಗಿ ಟಿವಿಯಲ್ಲಿ ನನ್ನ ಹೆಸರು ಪ್ರಸ್ತಾಪ ಜಾಸ್ತಿ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.

మరింత సమాచారం తెలుసుకోండి: