ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಜೆಡಿಎಸ್ ದಿನಕಳೆದಂತೆ ತನ್ನ ಅಸ್ಥಿತ್ವ ಕಳೆದುಕೊಳ್ಳುತ್ತಲೇ ಇದೆ. ಹೌದು, ಇದಕ್ಕೆ ಪ್ರಸ್ತುತ ಉಪ ಚುನಾವಣೆಯಲ್ಲಿ ಜೆಡಿಎಸ್ ಗಿಂತ ನೋಟಾಗೆ ಹೆಚ್ಚು ಮತಗಳು ಬಂದಿರುವುದೇ ಸಾಕ್ಷಿ. ಪ್ರಸ್ತುತ ಉಪಚುನಾವಣೆಯಲ್ಲಿ 12 ಸ್ಥಾನಗಳೊಂದಿಗೆ ಆಡಳಿತಾರೂಢ ಬಿಜೆಪಿಗೆ ಮತದಾರರು ಜೈ ಎಂದಿದ್ದರೆ, ಕಾಂಗ್ರೆಸ್ ಗೆ ಕೇವಲ 2 ಸ್ಥಾನಕ್ಕೆ ತೃಪ್ತಿ ಪಡಬೇಕಾಗಿದೆ. ಆದರೆ ತೆನೆ ಹೊತ್ತ ಮಹಿಳೆ ಜೆಡಿಎಸ್ ಮಾತ್ರ ಶೂನ್ಯ ಸಂಪಾದನೆ ಮಾಡಿದ್ದು ರಾಜ್ಯದಲ್ಲಿ ತೀವ್ರ ಮುಖಭಂಗ ಅನುಭವಿಸಿದೆ.
 
ಅದರಲ್ಲೂ ಜೆಡಿಎಸ್ ನ ಭದ್ರಕೋಟೆಯಾಗಿದ್ದ ಮಂಡ್ಯದ ಕೆ.ಆರ್ ಪೇಟೆಯಲ್ಲಿ ಸೋಲನುಭವಿಸಿದೆ. ಇಲ್ಲಿ ಮೊದಲ ಬಾರಿ ಬಿಜೆಪಿ ತನ್ನ ಖಾತೆ ತೆರೆದಿದೆ. ಇಷ್ಟೆಲ್ಲಾ ಸೋಲಿನ ಮಧ್ಯೆ ಮತ್ತೊಂದು ಅವಮಾನ ಜೆಡಿಎಸ್ ಕಾಡಿದ್ದು, ನೋಟಾಗೆ ಹೆಚ್ಚಿನ ಮತ ಚಲಾವಣೆಯಾಗಿದ್ದು. ಹೌದು ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಗಿಂತ ನೋಟಾಗೆ ಹೆಚ್ಚಿನ ಮತಗಳು ಬಿದ್ದಿವೆ. 
 
ಜೆಡಿಎಸ್ ನೋಟಾ ಮತಗಳ ಲೆಕ್ಕಾಚಾರ ಇಲ್ಲಿದೆ ನೋಡಿ:-
 ಕೆ.ಆರ್. ಪುರ:- ಇಲ್ಲಿ ಬಿಜೆಪಿಯ ಬೈರತಿ ಬಸವರಾಜು ಅವರು ಭರ್ಜರಿಯಾಗಿ ಗೆದ್ದಿದ್ದಾರೆ. ಬೈರತಿಗೆ 1,39,833 ಮತಗಳು ಲಭಿಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಎಂ ನಾರಾಯಣ ಸ್ವಾಮಿಗೆ 76,428 ಮತ ಲಭಿಸಿವೆ. ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಕೃಷ್ಣಮೂರ್ತಿ ಅವರು ಗಳಿಸಿದ್ದು ಕೇವಲ 2,048 ಮತಗಳನ್ನು ಮಾತ್ರ. ಆದರೆ ಕ್ಷೇತ್ರದಲ್ಲಿ ಒಟ್ಟು 5,181 ಜನರು ನೋಟಾಗೆ ಜೈ ಎಂದಿದ್ದಾರೆ.
 
ರಾಣೆಬೆನ್ನೂರು:-
ಅರುಣ್ ಕುಮಾರ್ 95,408 ಮತ ಪಡೆದರೆ, ಹಳೆ ಹುಲಿ ಕಾಂಗ್ರೆಸ್ ನ ಕೆ ಬಿ ಕೋಳಿವಾಡ 72,187 ಮತಗಳನ್ನು ಗಳಿಸಿದ್ದರು. ಇಲ್ಲಿ ನೋಟಾಗೆ 1608 ಮತಗಳು ಚಲಾವಣೆಯಾಗಿದ್ದರೆ, ಅದಕ್ಕಿಂತಲೂ ಕಡಿಮೆ ಅಂದರೆ ಕೇವಲ 979 ಮತಗಳು ಜೆಡಿಎಸ್ ಪಡೆದಿದೆ. 
 
ಯಲ್ಲಾಪುರ: ಇಲ್ಲಿ ಕಮಲ ಪಕ್ಷದ ಶಿವರಾಂ ಹೆಬ್ಬಾರ್ 80442 ಮತ ಪಡೆದಿದ್ದರೆ, ಕಾಂಗ್ರೆಸ್ ನ ಭೀಮಣ್ಣ ನಾಯ್ಕ 49034 ಮತ ಪಡೆದಿದ್ದರು. ಆದರೆ ಈ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಗಿಟ್ಟಿಸಿದ್ದ ಚೈತ್ರಾ ಗೌಡಗೆ ಲಭಿಸಿದ್ದು ಕೇವಲ 1235 ಮತಗಳು. ಆದರೆ ಮತದಾರರು ಅವರಿಗಿಂತ ಹೆಚ್ಚಿನ ಮತಗಳನ್ನು (1444)ನೋಟಾಗೆ ನೀಡಿದ್ದಾರೆ.
 
 
 

మరింత సమాచారం తెలుసుకోండి: