ಮುಂಬೈ: ಮಹಾರಾಷ್ಟ್ರದಲ್ಲಿ ಭಾರೀ ಹೈಡ್ರಾಮಗಳೆಲ್ಲಾ ನಡೆದ ಮೇಲೆ ಶಿವಸೇನೆ, ಕಾಂಗ್ರೆಸ್, ಎನ್.ಸಿ.ಪಿ ಮೈತ್ರಿ ಸರ್ಕಾರ ರಚನೆಯಾಗಿ ಇದೀಗ ಸಚಿವ ಸಂಪುಟ ರಚನೆಯ ಬೆನ್ನಲ್ಲೇ ಅಸಮಾಧಾನ ಭುಗಿಲೆದ್ದಿದ್ದು, ಮೈತ್ರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಿವ ಸೇನೆ ನಾಯಕ ಸಂಜಯ್ ರಾವತ್ ಅವರೇ ಪ್ರಮಾಣ ವಚನ ಸಮಾರಂಭಕ್ಕೆ ಗೈರಾಗುವ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ. ಇದೀಗ ಕಾಂಗ್ರೆಸ್ ನಾಯಕರು ಅಸಮಾಧಾನ ಹೊರ ಹಾಕಿದ್ದು, ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಅಳಲು ತೋಡಿಕೊಂಡಿದ್ದಾರೆ. ಆದ್ದರಿಂದ ಸರ್ಕಾರ ಉಳಿಯುತ್ತಾ ಉರುಳುತ್ತಾ ಎನ್ನುವ ಮಾತುಗಳು ಕೇಳಿ ಬರುತ್ತಿವೆ. 
 
ಮೈತ್ರಿಯಲ್ಲಿ ಇತ್ತೀಚೆಗಷ್ಟೇ ಸಚಿವ ಸಂಪುಟ ರಚಿಸಲಾಗಿತ್ತು. 
ಮಹಾರಾಷ್ಟ್ರದ ಕಾಂಗ್ರೆಸ್ ಹಿರಿಯ ನಾಯಕ ಪೃಥ್ವಿರಾಜ್ ಚೌವ್ಹಾಣ್ ಸೇರಿದಂತೆ ಹಲವು ನಾಯಕರು ಅಸಮಾಧಾನಗೊಂಡಿದ್ದಾರೆ. ಪಕ್ಷದ ನಿಷ್ಠಾವಂತ ನಾಯಕರಾದ ಚೌವ್ಹಾಣ್, ನಸೀಮ್ ಖಾನ್, ಪ್ರಣಿತಿ ಶಿಂಧೆ, ಸಂಗ್ರಾಮ್ ತೋಪ್ಟೆ, ಅಮಿನ್ ಪಟೇಲ್ ಹಾಗೂ ರೋಹಿದಾಸ್ ಪಾಟೀಲ್ ಅವರು ಸೋಮವಾರ ಸಂಜೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದರು. ಇದರ ಬೆನ್ನಲ್ಲೇ ದೆಹಲಿಯ ಅವರ ನಿವಾಸದಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಅಸಮಾಧಾನ ಹೊರ ಹಾಕಿದ್ದು, ಭಾರೀ ಚರ್ಚೆಗಳು ನಡೆಯುತ್ತಿವೆ. 
 
ಸೋಮವಾರವಷ್ಟೇ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಜಿತ್ ಪವಾರ್ ಹಾಗೂ 34 ಇತರ ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ಮೂಲಕ ಸರ್ಕಾರ ರಚನೆಯಾಗಿ ಒಂದು ತಿಂಗಳ ನಂತರ ಸಚಿವ ಸಂಪುಟ ರಚನೆಯ ಪ್ರಹಸನಕ್ಕೆ ವಿರಾಮ ಬಿದ್ದಿತ್ತು. ಇದೀಗ ಕಾಂಗ್ರೆಸ್ ಹಾಗೂ ಸ್ವತಃ ಕೆಲ ಶಿವಸೇನೆ ನಾಯಕರಲ್ಲಿಯೇ ಅಸಮಾಧಾನ ಭುಗಿಲೆದ್ದಿದ್ದು, ಇದು ಸಿಎಂ ಉದ್ಧವ್ ಠಾಕ್ರೆಗೆ ಸವಾಲಾಗಿ ಪರಿಣಮಿಸಿದೆ. ಇತ್ತ ಎನ್‍ಸಿಪಿಯ ಒಂದು ವಿಕೆಟ್ ಪತನವಾಗುವ ಹಂತ ತಲುಪಿದ್ದು, ಸಚಿವ ಸಂಪುಟ ರಚನೆಯಾದ ಕೆಲವೇ ಗಂಟೆಗಳ ನಂತರ ಎನ್‍ಸಿಪಿ ಶಾಸಕ ಪ್ರಕಾಶ್ ಸೋಳಂಕಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ನಿರ್ಧಾರ ಪ್ರಕಟಿಸಿದ್ದು ಸರ್ಕಾರ ಉರುಳುತ್ತಾ ಎಂಬ ಸನ್ನಿವೇಶ ಸೃಷ್ಠಿಯಾಗುತ್ತಿದೆ.
 
 
 

మరింత సమాచారం తెలుసుకోండి: