ಬಳ್ಳಾರಿ: ಪ್ರಸ್ತುತ ರಾಷ್ಟ್ರದಲ್ಲಿ ಪೌರತ್ವ ತಿದ್ದುಪಡಿ ಹಾಗೂ ನೊಂದಣಿ ಕಾಯ್ದೆ ವಿರುದ್ದ ಸಿಡಿದೆದ್ದ ಜನತೆ ಕಂಡ ಕಂಡಲೆಲ್ಲಾ ಪ್ರತಿಭಟನೆ ಮಾಡುತ್ತಿದ್ದಾರೆ. ಸಿಎಎ ಹಾಗೂ ಎನ್.ಆರ್.ಸಿ ಪರವಾಗಿಯೂ ಪ್ರತಿಭಟನೆಗಳು ನಡೆಯುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ಭಾರೀ ಹೇಳಿಕೆ ನೀಡಿದ್ದು ಗೊಂದಲ ಸೃಷ್ಠಿಸಿತ್ತು. ಇದೀಗ ಅದಕ್ಕೆ ಪೂರಕ ಹೇಳಿಕೆ ನೀಡಿದ್ದಾರೆ. 
 
ಪೌರತ್ವ ತಿದ್ದುಪಡಿ ಕಾನೂನು ವಿರೋಧಿಸುವವರು ದೇಶ ಬಿಟ್ಟು ಹೋಗಿ ಎಂದಿದ್ದ ಶಾಸಕ ಜಿ. ಸೋಮಶೇಖರರೆಡ್ಡಿ ಇದೀಗ ಮುಸಲ್ಮಾನರ ಪರ ನಾವಿದ್ದೇವೆ. ದೇಶ ಬಿಟ್ಟು ಹೋಗುವ ಪರಿಸ್ಥಿತಿ ಯಾರಿಗೂ ಬರಲ್ಲ ಎನ್ನುವ ಮೂಲಕ ಮುಸಲ್ಮಾನರ ಬೆನ್ನಿಗೆ ನಿಂತಿದ್ದಾರೆ. ಇಲ್ಲಿನ ಶ್ರೀನಗರದಲ್ಲಿ ಪೌರತ್ವ ಕಾಯ್ದೆ ತಿದ್ದುಪಡಿ ಕುರಿತು ಕರಪತ್ರ ಹಂಚಿ ಜಾಗೃತಿ ಮೂಡಿಸುವ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ದೇಶಬಿಟ್ಟು ಹೋಗುವ ಪರಿಸ್ಥಿತಿ ಯಾರಿಗೂ ಬರಲ್ಲ. ಮುಸಲ್ಮಾನರ ಪರ ನಾವಿದ್ದೇವೆ. ಬಿಜೆಪಿ ಎಲ್ಲರನ್ನೂ ಕಾಪಾಡುತ್ತದೆ. ದೇಶ ಬಿಡೋ ಪರಿಸ್ಥಿತಿ ಬಂದರೆ ನಾನೂ ಅವರ ಹಿಂದೆ ಹೋಗುತ್ತೇನೆ ಎಂದರು.
 
ದೇಶದಲ್ಲಿ ಹುಟ್ಟಿರುವ ಪ್ರತಿಯೊಬ್ಬರೂ ಇಲ್ಲಿನ ಸದಸ್ಯರು. ನೂರಕ್ಕೆ ನೂರ ರಷ್ಟು ಹೇಳುತ್ತೇನೆ ಭಾರತದಲ್ಲಿ ಹುಟ್ಟಿದವರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಪೌರತ್ವ ವಿರೋಧಿಸುವುದಕ್ಕಾಗಿ ಪ್ರತಿಭಟನೆ, ಗಲಾಟೆ ಹಿಂಸೆ ಮಾಡಿದರೆ ಉಪಯೋಗವಿಲ್ಲ. ಹಲವೆಡೆ ಗಲಾಟೆಯಾಗಿದೆ. ಆದರೆ ಯಾವೊಬ್ಬ ಮುಸಲ್ಮಾನರು ದೂರು ನೀಡಿಲ್ಲ. ಕಾಂಗ್ರೆಸ್‌ ನಾಯಕರು ದೂರು ಕೊಟ್ಟಿದ್ದಾರೆ. ಇದೇ ವಿಷಯಕ್ಕೆ ದೇಶ ದಲ್ಲಿ 13,800 ಕೋಟಿ ರೂ. ಆಸ್ತಿಪಾಸ್ತಿ ಹಾನಿಯಾಗಿದೆ. ಈ ಕಾರಣಕ್ಕಾಗಿಯೇ ನಾನು ಮಾತನಾಡಿದ್ದೇನೆ ಹೊರತು, ನಾನು ಮುಸ್ಲಿಂ ವಿರೋಧಿಯಲ್ಲ ದೇಶದ ಆಸ್ತಿಪಾಸ್ತಿ ಹಾನಿಯಾದರೆ ನಮಗೆ ಕೋಪ ಬರುತ್ತದೆ ಎಂದರು. ಅದು ಸರಿಯಾ ಎಂದಿದ್ದಾರೆ. 
 
ಪೌರತ್ವ ತಿದ್ದುಪಡಿ ಕಾನೂನು ವಿರೋಧ ಮಾಡುವುದಾದರೆ ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕು. ಕಾಯ್ದೆ ಬಗ್ಗೆ ಇರುವ ಗೊಂದಲವನ್ನು ನಿವಾರಣೆ ಮಾಡುವ ಸಲುವಾಗಿ ಕರಪತ್ರ ಹಂಚಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು. ಅದೇ ರೀತಿ ಕಾರ್ಯೋನ್ಮುಖ ರಾಗುತ್ತೇವೆ ಎಂದಿದ್ದಾರೆ.

మరింత సమాచారం తెలుసుకోండి: