ಹುಬ್ಬಳ್ಳಿ: ಬಿಜೆಪಿಯವರು ಜನರ ಮಾತು ಕೇಳದೆ ತಮಗೆ ತೋಚಿದ್ದನ್ನು ಮಾಡುತ್ತಿದ್ದಾರೆ, ಸರಿ ತಪ್ಪುಗಳ ಚರ್ಚೆ ನಡೆಯುತ್ತಿಲ್ಲ. ಸಂವಿಧಾನಕ್ಕೆ ವಿರುದ್ಧವಾದ ಸಿಎಎ ಕಾನೂನು ಮಾಡಿದ್ದಾರೆ. ಬಿಜೆಪಿಯವರು ಸುಳ್ಳು ಹೇಳುವುದನ್ನು ಜನರಿಗೆ ನಾವು ತಿಳಿಸುತ್ತಿದ್ದೇವೆ. ದೇಶದಲ್ಲಿ ಪ್ರಜಾಪ್ರಭುತ್ವ ಇಲ್ಲ, ವಾಕ್‌ ಸ್ವಾತಂತ್ರ ಹತ್ತಿಕ್ಕಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದಾರೆ. 
 
ಬೆಂಗಳೂರಿನ ಜ್ಯೋತಿ ನಿವಾಸ ಕಾಲೇಜಿನ ಗಲಾಟೆ ವಿಚಾರದ ಬಗ್ಗೆ ಮಾತನಾಡಿದ ಅವರು, ಜ್ಯೋತಿನಿವಾಸದಲ್ಲಿ ಕಾಲೇಜು ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ಮಾಡಿದ್ದಾರೆ.ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಇಲ್ಲ, ಯಾರೂ ಅಭಿಪ್ರಾಯ ಹೇಳುವ ಹಾಗಿಲ್ಲ. ಹೆದರಿಸಿ ಭಯದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ. ಜೆಎನ್‌ಯುನಲ್ಲಿ ನಡೆದದ್ದು ಸರ್ಕಾರಿ ಪ್ರಯೋಜಿತ ದಾಳಿಯಾಗಿದೆ. ಇದುವರೆಗೆ ಒಬ್ಬರನ್ನೂ ಅರೆಸ್ಟ್ ಮಾಡಿಸಿಲ್ಲ ಏಕೆ, ಪ್ರಜಾಪ್ರಭುತ್ವ ದಲ್ಲಿ ಏನು ನಡೆಯುತ್ತಿದೆ? ಎಂದು ಪ್ರಶ್ನಿಸಿದ್ದಾರೆ. ದೆಹಲಿ ಪೊಲೀಸರು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೈಕೆಳಗೆ ಕೆಲಸ ಮಾಡುತ್ತಿದ್ದಾರೆ. ದೆಹಲಿ ಪೊಲೀಸರು ಗೃಹ ಸಚಿವರು ಹೇಳಿದಂತೆ ಕೇಳುತ್ತಿದ್ದಾರೆ.
 
ಘಟನೆ ನಡೆದು 72 ಗಂಟೆಗಳಾದರೂ ಪೊಲೀಸರು ಏನು ಮಾಡುತ್ತಿದ್ದಾರೆ ದೇಶದಲ್ಲಿ ಸರ್ವಾಧಿಕಾರ ನಡೆಯುತ್ತಿದೆ. ಸಿಎಎ ವಿರುದ್ಧ ನಾವು ನೇರವಾಗಿ ಪ್ರತಿಭಟನೆಗೆ ಇಳಿದಿಲ್ಲ. ಕಾಂಗ್ರೆಸ್ ಸ್ಪಷ್ಟವಾಗಿ ಸಿಎಎ ಕಾಯ್ದೆಯನ್ನ ವಿರೋಧಿಸುತ್ತದೆ ಎಂದು ಗುಡುಗಿದ್ದಾರೆ.  ಕೆಪಿಸಿಸಿ ಅಧ್ಯಕ್ಷರ‌ ಆಯ್ಕೆ ಕುರಿತು ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಈ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಕೇಂದ್ರ ಸರ್ಕಾರ ಕೊಟ್ಟಿರುವ ನೆರೆ ಪರಿಹಾರ ಯಾವುದಕ್ಕೂ ಸಾಲಲ್ಲಾ, ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಕೊಟ್ಟಿದ್ದಾರೆ. ಬರಗಾಲದ ಪರಿಹಾರ ಇನ್ನೂ ಬಂದಿಲ್ಲ. ಕೇಂದ್ರ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಜಿಎಸ್‌ಟಿ, ಕುಡಿಯುವ ನೀರು, ಕೇಂದ್ರ ಪ್ರಾಯೋಜಿತ ಯೋಜನೆಗಳ ಹಣ ರಾಜ್ಯಕ್ಕೆ ಬಂದಿಲ್ಲ‌. ಕೇಂದ್ರದವರು ರಾಜ್ಯಗಳನ್ನೂ ಸಹ ದಿವಾಳಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಕೇಂದ್ರ ದಿವಾಳಿಯಾಗಿಹೋಗಿದೆ. 
 
ಐದು ಸಾವಿರ ಕೋಟಿ ರಾಜ್ಯಕ್ಕೆ ಬರಬೇಕಾದ ಹಣ ಬರ್ತಾಯಿಲ್ಲಾ. ಸಿಎಂ ಯಡಿಯೂರಪ್ಪ ಏನು ಕಡಿದು ಕಟ್ಟೆ ಹಾಕ್ತಾರೆ ನೋಡ್ತಿದ್ದೀವಿ. ಆಮೇಲೆ ರಸ್ತೆಗಿಳಿದು ಹೋರಾಟ ಮಾಡುತ್ತೇವೆ. ಯಡಿಯೂರಪ್ಪ ಏನು ಮಾಡುತ್ತಿದ್ದಾರೆ. ಶೀಘ್ರದಲ್ಲಿ ಪೂರ್ಣ ನೆರೆ ಪರಿಹಾರ ಬಿಡುಗಡೆ ಮಾಡಬೇಕೆಂದರು.

మరింత సమాచారం తెలుసుకోండి: