ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ದಾವೋಸ್ ಗೆ ಭೇಟಿ ನೀಡಿ ರಾಜ್ಯಕ್ಕೆ ವಾಪಾಸ್ಸಾಗುತ್ತಿದ್ದಂತೆ ಸಚಿವ ಸಂಪುಟ ವಿಸ್ತರಣೆಯ ಕುತೂಹಲ ಗರಿಗೆದರಿದೆ. ಅದರಲ್ಲೂ ಕೂಡ ಸೋತವರಿಗೆ ಸಚಿವ ಸ್ಥಾನ ಇಲ್ಲ ಎಂಬ ಸಿಎಂ ಬಿ.ಎಸ್‌ ಯಡಿಯೂರಪ್ಪ ಹೇಳಿಕೆ ಕುತೂಹಲ ಕೆರಳಿಸಿದೆ. ಸೋತ ಅನರ್ಹ ಶಾಸಕರಾದ ಎಂಟಿಬಿ ನಾಗರಾಜ್ ಹಾಗೂ ಎಚ್‌.ವಿಶ್ವನಾಥ್ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದು ಸಿಎಂ ಈ ಹೇಳಿಕೆ ಅವರಿಗೆ ನಿರಾಸೆ ಉಂಟು ಮಾಡಿರುವುದರಲ್ಲಿ ಸಂಶಯವಿಲ್ಲ. ಇದೀಗ ಸಂಪುಟದ ಸರ್ಜರಿಗೆ ಭಾರೀ ಕಸರತ್ತುಗಳು ನಡೆದಿದ್ದು, ಯಾವಾಗ ಸರ್ಜರಿ ಗೊತ್ತಾ!? 
 
ಇತ್ತೀಚೆಗಷ್ಟೇ ಫಲಿತಾಂಶ ಬಂದ ಉಪಚುನಾವಣೆಯಲ್ಲಿ ಸೋತ ಎಂಟಿಬಿ ನಾಗರಾಜ್‌ ಹಾಗೂ ಎಚ್‌.ವಿಶ್ವನಾಥ್ ಪ್ರಬಲ ಸಚಿವಾಕಾಂಕ್ಷಿಗಳಾಗಿದ್ದರು. ಈಗಾಗಲೇ ಸಿಎಂ ಬಿ.ಎಸ್‌ ಯಡಿಯೂರಪ್ಪ ಅವರ ಜೊತೆಗೆ ಎಂಟಿಬಿ ನಾಗರಾಜ್ ಚರ್ಚೆ ನಡೆಸಿದ್ದು ಸಂಪುಟ ಸೇರುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು.
 
ಹುಣಸೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಚ್‌. ವಿಶ್ವನಾಥ್ ಕೂಡಾ ಸಚಿವ ಸ್ಥಾನದ ಬೇಡಿಕೆ ಇಟ್ಟಿದ್ದರು. ಆದರೆ ಸೋತವರಿಗೆ ಸಂಪುಟದಲ್ಲಿ ಸ್ಥಾನ ಇಲ್ಲ ಎಂದು ಸಿಎಂ ನೀಡಿರುವ ಹೇಳಿಕೆ ಈ ಇಬ್ಬರಿಗೆ ಇದೀಗ ದಾರಿ ಕಾಣದಾಗಿದೆ. ಸಮ್ಮಿಶ್ರ ಸರಕಾರದ ಪತನದಲ್ಲಿ ಎಚ್‌. ವಿಶ್ವನಾಥ್ ಮಹತ್ವದ ಪಾತ್ರವನ್ನು ನಿಭಾಯಿಸಿದ್ದರು. ಹಿರಿಯ ಮುಖಂಡರಾಗಿರುವುದರಿಂದ ಅವರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಚುನಾವಣಾ ಸೋಲು ಇದಕ್ಕೆ ತೊಡಕಾಗಿದೆ. ಇನ್ನು ಎಂಟಿಬಿ ನಾಗರಾಜ್ ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದವರು. ಕಾಂಗ್ರೆಸ್ ಪಕ್ಷ ತೊರೆದು ಬಿಎಸ್‌ವೈ ಕೈಹಿಡಿದರೂ ಉಪ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡ ವಿರುದ್ಧ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು.
 
ಚುನಾವಣಾ ಸೋಲಿನ ದಿನದಂದು ಸಿಎಂ ಬಿಎಸ್‌ವೈ ಎಂಟಿಬಿ ನಾಗರಾಜ್ ನಿವಾಸಕ್ಕೆ ಭೇಟಿ ನೀಡಿ ಸಚಿವ ಸ್ಥಾನದ ಭರವಸೆ ನೀಡಿದ್ದರು. ಆದರೆ ಸಂಪುಟ ಸೇರಲು ಮುಂದಾಗಿರುವ ಆಕಾಂಕ್ಷಿಗಳ ಪಟ್ಟಿ ದೊಡ್ಡದಿರುವುದರಿಂದ ಎಂಟಿಬಿಗೆ ಮಂತ್ರಿಗಿರಿ ಸಿಗದಿರುವುದು ಸಿಎಂ ಮಾತಿನಿಂದ ಅಧಿಕೃತಗೊಂಡಿದೆ. ಇನ್ನು ಮೂರೇ ದಿನದಲ್ಲಿ ಸಂಪುಟ ಸರ್ಜರಿ ನಡೆಯೋದು ಫಿಕ್ಸ್ ಆಗಿದೆ.

మరింత సమాచారం తెలుసుకోండి: