ಮಂಗಳೂರು: ಇಲ್ಲಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪೋಟಕ ಪತ್ತೆಯಾಗಿದ್ದ ಸಂದರ್ಭದಲ್ಲಿ ಮಂಗಳೂರಿಗೆ ಆಗಮಿಸಿದ್ದ ಮಾಜೀ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರು ಘಟನೆಯ ಕುರಿತಾಗಿ ಪತ್ರಕರ್ತರಲ್ಲಿ ಮಾತನಾಡುವ ಸಂದರ್ಭದಲ್ಲಿ ‘ಮಿಣಿ ಮಿಣಿ’ ಪೌಡರ್ ಎಂಬ ಹೊಸ ಪದವನ್ನು ಬಳಕೆ ಮಾಡಿದ್ದರು. ಬಳಕೆ ಮಾಡಿದ್ದೇ ತಡ ಶುರುವಾಯಿತು ನೋಡಿ ಮಿಣಿ ಮಿಣಿ ಪೌಡರ್ ಟ್ರೋಲ್ ಹವಾ.
 
ಅಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಪೊಲೀಸರಿಗೆ ಸಿಕ್ಕಿದ್ದು ಬಾಂಬ್ ತಯಾರಿಯಲ್ಲಿ ಬಳಸುವ ಸ್ಪೋಟಕವಲ್ಲ ಬದಲಾಗಿ ಪಟಾಕಿ ತಯಾರಿಯಲ್ಲಿ ಬಳಸುವ ‘ಮಿಣಿ ಮಿಣಿ’ ಪೌಡರ್ ಎಂದು ಅವರು ಹೇಳಿದ್ದು ಆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಈ ಹೊಸ ಶಬ್ದವನ್ನು ಕುಮಾರಸ್ವಾಮಿ ಅವರ ಬಾಯಲ್ಲಿ ಕೇಳಿದ ಯುವಜನರಂತೂ ಅದಕ್ಕೆ ಯಾವ್ಯಾವುದೋ ಸಿನೇಮಾಗಳ ಕಾಮಿಡಿ ದೃಶ್ಯಗಳನ್ನು, ಹಾಡುಗಳನ್ನು ಸೇರಿಸಿ ಮೀಮ್ ತಯಾರಿಸಿ ಜಾಲತಾಣಗಳಲ್ಲಿ ಹಂಚಿಕೊಳ್ಳತೊಡಗಿದರು. ಇದೀಗ ಈ ಮಿಣಿ ಮಿಣಿ ಪೌಡರ್ ರಂಗಸ್ಥಳಕ್ಕೂ ಕಾಲಿಟ್ಟಿದೆ. ತೆಂಕುತಿಟ್ಟಿನ ಬಯಲಾಟ ಮೇಳವೊಂದರ ಇತ್ತೀಚಿನ ಯಕ್ಷಗಾನ ಪ್ರದರ್ಶನ ಸಂದರ್ಭದಲ್ಲಿ ಹಾಸ್ಯಗಾರರೊಬ್ಬರು ರಂಗಸ್ಥಳದಲ್ಲಿ ‘ಮಿಣಿ ಮಿಣಿ ಪುಡಿ’ಯ ಪ್ರಸ್ತಾಪ ಮಾಡಿದ್ದಾರೆ.
 
ಭಾಗವತರೊಂದಿಗೆ ತುಳು ಭಾಷೆಯಲ್ಲಿ ಮಾತನಾಡುತ್ತ ಈ ಪಾತ್ರಧಾರಿ ಇದನ್ನು ಪ್ರಸ್ತಾಪಿಸುತ್ತಾರೆ. ‘ಈ ಸಲ ನಮ್ಮಲ್ಲೆಲ್ಲಾ ಭಾರೀ ಭಾರೀ ರೀತಿಯ ಹುಡಿ ತಯಾರಾಗಿದೆ’ ಎಂದು ಆತ ಹೇಳುವಾಗ ಭಾಗವತರು ‘ಯಾವ ಹುಡಿ’ ಎಂದು ಕೇಳುತ್ತಾರೆ. ಅದಕ್ಕೆ ವಿದೂಷಕ ‘ಮಿಣಿ ಮಿಣಿ ಹುಡಿ’ ಎಂದು ಹೇಳುತ್ತಾರೆ. ಮಾತ್ರವಲ್ಲದೇ ಇದನ್ನು ನನಗೆ ಹಾಸನದವರೊಬ್ಬರು ಕೊಟ್ಟಿದ್ದು ಎಂದು ಸೂಚ್ಯವಾಗಿ ಹೇಳುವಾಗ ಸಭೆಯಲ್ಲಿ ನಗು ಕೇಳಿಸುತ್ತದೆ. ಅವರ ತಲೆಯಲ್ಲಿ ಕೂದಲು ಕಮ್ಮಿ ಇದೆ ಮತ್ತು ಅವರೊಬ್ಬರು ದೊಡ್ಡ ಜ್ಯೋತಿಷಿ ಎಂದು ತನಗೆ ಮಿಣಿ ಮಿಣಿ ಪುಡಿ ಕೊಟ್ಟವರ ಪರಿಚಯವನ್ನು ಪಾತ್ರಧಾರಿ ಹೇಳುತ್ತಿರುವುದು ಈ ವಿಡಿಯೋದಲ್ಲಿ ದಾಖಲಾಗಿದೆ. 
 
ಯಕ್ಷಗಾನದಲ್ಲಿ ಮಿಣಿ ಮಿಣಿ ಪುಡಿಯ ಪ್ರಸ್ತಾವನೆಯಾಗುವ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ಹಿಂದೆ ಹೌದೋ ಹುಲಿಯಾ ಡೈಲಾಗ್ ಭಾರೀ ಫೇಮಸ್ ಆಗಿತ್ತು.

మరింత సమాచారం తెలుసుకోండి: