ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೊನೆಗೂ “ಕಾವೇರಿ’ ನಿವಾಸ ತೊರೆದು ಗಾಂಧಿ ಭವನದ ಹಿಂಭಾಗದ ಸರ್ಕಾರಿ ನಿವಾಸಕ್ಕೆ ಶಿಫ್ಟ್ ಆಗಿದ್ದಾರೆ.ಈ ಹಿಂದೆ ಪ್ರತಿಪಕ್ಷ ನಾಯಕನಾಗಿದ್ದಾಗ ವಾಸವಿದ್ದ ಗಾಂಧಿ ಭವನ ಹಿಂಭಾಗದ ಸರ್ಕಾರಿ ನಿವಾಸದಲ್ಲಿ ಬುಧವಾರ ಪೂಜೆ ಸಲ್ಲಿಸಿ ಪ್ರವೇಶಿಸಿದರು. ನಾನು ಇಲ್ಲೇ ಇರುತ್ತೇನೆ ಎಂದವರು ಇದೀಗ ಬದಲಾಗಿದ್ದು ಏಕೆ ಗೊತ್ತಾ! 
 
ಸಿದ್ದರಾಮಯ್ಯ ಅವರಿಗೆ ಹಂಚಿಕೆಯಾದ ಹಿನ್ನೆಲೆಯಲ್ಲಿ ನಿವಾಸಕ್ಕೆ ಸುಣ್ಣ ಬಣ್ಣ ಹೊಡೆಸಿ ಸಜ್ಜಾಗಿಸಲಾಗಿತ್ತು. ಪೂಜೆ ಪ್ರಯುಕ್ತ ಬುಧವಾರ ಹೂವಿನಿಂದ ಮನೆ ಅಲಂಕರಿಸಲಾಗಿತ್ತು. ಸಿದ್ದರಾಮಯ್ಯ ಅವರ ಕುಟುಂಬ ಸದಸ್ಯರು ಪೂಜೆಯಲ್ಲಿ ಪಾಲ್ಗೊಂಡಿದ್ದರ. ಈ ನಿವಾಸದಲ್ಲಿ ಮಾಜಿ ಸಚಿವ ಎಚ್‌.ಡಿ ರೇವಣ್ಣ ವಾಸವಿದ್ದರು. ಆ ನಂತರ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಆ ನಿವಾಸಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ, ಕಾವೇರಿ ಖಾಲಿ ಮಾಡಲು ಸಿದ್ದರಾಮಯ್ಯ ಅವರಿಗೆ ಸೂಚಿಸ ಲಾಗಿತ್ತು. ಆಗ ಅವರು ಗಾಂಧಿ ಭವನ ಸಮೀಪದ ಸರ್ಕಾರಿ ನಿವಾಸ ಬೇಕು ಎಂದು ಬೇಡಿಕೆ ಇಟ್ಟಿದ್ದರು. ಅದರಂತೆ ಹಂಚಿಕೆ ಮಾಡಲಾಗಿತ್ತು. ಆರು ವರ್ಷಗಳ ಕಾಲ ಕಾವೇರಿಯಲ್ಲಿ ವಾಸ್ತವ್ಯವಿದ್ದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಇಳಿದ ನಂತರವೂ ಜೆಡಿಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಕೆ.ಜೆ ಜಾರ್ಜ್‌ ಅವರಿಗೆ ಕಾವೇರಿ ಹಂಚಿಕೆ ಮಾಡಲಾಗಿತ್ತಾದರೂ ಸಿದ್ದರಾಮಯ್ಯ ಅವರೇ ವಾಸವಿದ್ದರು. ನನಗಿದು ಇಷ್ಟವಾಗಿದೆ, ಯಾರಿಗೂ ಬಿಡುವುದಿಲ್ಲ ಎಂದಿದ್ದರು. 
 
ಸಿಎಂ ಬಿ.ಎಸ್‌ ಯಡಿಯೂರಪ್ಪ ಅವರು ಇದೀಗ ಕಾವೇರಿ ನಿವಾಸದಲ್ಲಿ ವಾಸ್ತವ್ಯ ಹೂಡಲು ತೀರ್ಮಾನಿಸಿದ್ದಾರೆ. ಮುಖ್ಯಮಂತ್ರಿ ಯವರ ವಾಸ್ತವ್ಯಕ್ಕಾಗಿ ಕಾವೇರಿ ನಿವಾಸಕ್ಕೆ ಸುಣ್ಣ ಬಣ್ಣ ಬಳಿದು ವಾಸ್ತು ಪ್ರಕಾರ ಕೆಲವೊಂದು ಬದಲಾವಣೆ ಮಾಡಿ ಪ್ರವೇಶ ಮಾಡಲಿದ್ದಾರೆ. ಗೃಹ ಕಚೇರಿ ಕೃಷ್ಣಾ ಪಕ್ಕದಲ್ಲಿಯೇ ಕಾವೇರಿ ಇರುವುದರಿಂದ ಮುಖ್ಯಮಂತ್ರಿಯವರು ಅಲ್ಲಿ ವಾಸ್ತವ್ಯ ಇದ್ದರೆ ದೈನಂದಿನ ಕೆಲಸ ಕಾರ್ಯಗಳು, ಜನರ ಕುಂದು ಕೊರತೆ ಆಲಿಸುವಿಕೆ, ಅಧಿಕಾರಿಗಳ ಸಭೆಗೆ ಸಹಕಾರಿಯಾಗಲಿದೆ. ಪ್ರಸ್ತುತ ಡಾಲರ್ ಕಾಲೋನಿಯ ದವಳಗಿರಿ ನಿವಾಸದಲ್ಲಿ ವಾಸವಿರುವ ಯಡಿಯೂರಪ್ಪ ಅವರು ಅಲ್ಲಿಂದ ನಿತ್ಯ ಕೃಷ್ಣಾಗೆ ಬಂದು ಕಾರ್ಯಮಗ್ನರಾಗುತ್ತಿದ್ದರು.

మరింత సమాచారం తెలుసుకోండి: