ಡೆಲ್ಲಿ: ಗುಜರಾತ್‌ ನ ಅಹಮದಾಬಾದ್‌ ನಲ್ಲಿ ಫೆಬ್ರವರಿ 24ರಂದು ನಡೆಯಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಕಾರ್ಯಕ್ರಮವನ್ನು ಅಮೆರಿಕದಲ್ಲಿ ಕಳೆದ ವರ್ಷ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮದ ಮಾದರಿಯಲ್ಲಿ ನಡೆಸಲು ಕೇಂದ್ರ ಸರಕಾರ ಯೋಜಿಸಿದ್ದು ಈಗಾಗಲೇ ಭಾರೀ ಪೂರ್ವ ಸಿದ್ದತೆಗಳು ನಡೆಸಲಾಗಿದೆ. 
 
ಕಾರ್ಯಕ್ರಮ ಗುಜರಾತ್‌ ನಲ್ಲಿ ನಡೆದರೂ ಅದನ್ನು ಪ್ರಾದೇಶಿಕ ಕಾರ್ಯಕ್ರಮದಂತೆ ಬಿಂಬಿಸದೆ, ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯುವಂತೆ ಮಾಡಲು ಕೇಂದ್ರ ಸರಕಾರ ಉದ್ದೇಶಿಸಿದೆ. ಹೀಗಾಗಿ ಈ ಮೊದಲು ‘ಕೆಮ್‌ ಛೊ ಟ್ರಂಪ್‌’ (ಗುಜರಾತಿ ಭಾಷೆಯಲ್ಲಿ ಹೇಗಿದ್ದೀರಿ ಟ್ರಂಪ್‌) ಎಂದು ಕರೆಯಲಾಗಿದ್ದ ಈ ಕಾರ್ಯಕ್ರಮಕ್ಕೆ ‘ನಮಸ್ತೆ ಟ್ರಂಪ್‌’ ಎಂದು ಮರು ನಾಮಕರಣ ಮಾಡಲಾಗಿದೆ.ಕೇಂದ್ರ ಸರಕಾರದ ನಿರ್ದೇಶನದ ಮೇರೆಗೆ ಕಾರ್ಯಕ್ರಮದ ಹೆಸರನ್ನು ಬದಲಿಸಲಾಗಿದೆ ಎಂದು ಗುಜರಾತ್‌ ಸರಕಾರದ ಅಧಿಕಾರಿಗಳು ತಿಳಿಸಿದ್ದು, ಇದೀಗ ನಮಸ್ತೇ ಟ್ರಂಪ್ ಎಂಬುದು ಟ್ರೆಂಡ್ ಆಗುತ್ತಿದೆ. 
 
ಇದೇ ತಿಂಗಳ 24 ಮತ್ತು 25 ರಂದು ಅಹಮದಾಬಾದ್‌ ಮತ್ತು ದಿಲ್ಲಿಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಡೊನಾಲ್ಡ್‌ ಟ್ರಂಪ್‌ ಹಾಗೂ ಪತ್ನಿ ಮೆಲಾನಿಯಾ ಟ್ರಂಪ್‌ ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅಹಮದಾಬಾದ್‌ ನಲ್ಲಿ 22 ಕಿ.ಮೀ. ರೋಡ್‌ ಶೋ, ವಿಶ್ವದ ಅತಿದೊಡ್ಡ ಕ್ರಿಕೆಟ್‌ ಸ್ಟೇಡಿಯಂ ಉದ್ಘಾಟನೆ ಬಳಿಕ ಸುಮಾರು 1 ಲಕ್ಷಕ್ಕೂ ಅಧಿಕ ಜನರನ್ನು ಉದ್ದೇಶಿಸಿ ಮೋದಿ ಮತ್ತು ಟ್ರಂಪ್‌ ಐತಿಹಾಸಿಕ ಭಾಷಣ ಮಾಡಲಿದ್ದಾರೆ ಎಂಬುದು ತಿಳಿದುಬಂದಿದೆ. 
 
ಇದು ಟ್ರಂಪ್‌ ಅವರ ಮೊದಲ ಭಾರತ ಭೇಟಿಯಾಗಿದೆ. ಮುಂದಿನ ವರ್ಷ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರನ್ನು ಸೆಳೆಯುವುದು ಸಹ ಟ್ರಂಪ್‌ ಭಾರತ ಭೇಟಿಯ ಉದ್ದೇಶವಾಗಿದೆ. ಫೆಬ್ರವರಿ 24ರಂದು ಡೊನಾಲ್ಡ್‌ ಟ್ರಂಪ್‌ ಅವರು ಆಗ್ರಾದಲ್ಲಿರುವ ತಾಜ್‌ ಮಹಲ್‌ ಗೆ ಭೇಟಿ ನೀಡುವ ಸಾಧ್ಯತೆಯಿದೆ. ಅಂದು ಸಂಜೆ 4.30ಕ್ಕೆ ಅಹಮದಾಬಾದ್‌ ನಿಂದ ಆಗ್ರಾಕ್ಕೆ ತೆರಳಲಿರುವ ಟ್ರಂಪ್‌ ದಂಪತಿ, ಸುಮಾರು 2 ಗಂಟೆ ಕಾಲ ತಾಜ್‌ ಮಹಲ್‌ ಆವರಣದಲ್ಲಿ ಕಳೆಯಲಿದ್ದಾರೆ. ಅಲ್ಲಿಂದ ದಿಲ್ಲಿಗೆ ಹೋಗಲಿದ್ದಾರೆ.

మరింత సమాచారం తెలుసుకోండి: