ಚಿತ್ರದುರ್ಗ: ಸ್ವಾತಂತ್ರ್ಯ ಹಿರಿಯ ಹೋರಾಟಗಾರ ದೊರೆಸ್ವಾಮಿ ಆನೆಯೋ, ಹಂದಿನೋ ಯಾರಿಗೆ ಗೊತ್ತು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಾಲಿಗೆ ಹರಿಬಿಟ್ಟಿದ್ದು ಇದೀಗ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. 
 
ದೊರೆಸ್ವಾಮಿ ಪಾಕ್ ಏಜೆಂಟ್ ಎಂಬ ಹೇಳಿಕೆಯನ್ನು ಸಾಣೆಹಳ್ಳಿ ಪಂಡಿತರಾದ್ಯ ಶ್ರೀಗಳು ಸಹ ಖಂಡಿಸಿದ್ದರು. ಹಿರಿಯ ಹೋರಾಟಗಾರರ ಬಗ್ಗೆ ಹಲವರು ಮಾತನಾಡಿದ್ದಾರೆ. ಹೀಗಾಗಿ ಆನೆ ನಡೆಯುವಾಗ ನಾಯಿಗಳು ಬೊಗಳಿದರೆ ಏನೂ ಆಗಲ್ಲ ಎಂದು ಸಾಣೇಹಳ್ಳಿ ಶ್ರೀ ಹೇಳಿಕೆ ನೀಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಈ ಬಗ್ಗೆ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ಯತ್ನಾಳ್, ದೊರೆಸ್ವಾಮಿ ಆನೆಯೋ, ಹಂದಿನೋ ಯಾರಿಗೆ ಗೊತ್ತು ಎಂದುಹೇಳಿಕೆ ನೀಡಿದ್ದು ಇದೀಗ ಭಾರೀ ಚರ್ಚೆಯಾಗುತ್ತಿದೆ. 
 
ದೊರೆಸ್ವಾಮಿ ಅವರ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಯತ್ನಾಳ್ ಹುಟ್ಟಿದ್ದರೋ ಇಲ್ಲವೋ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ದೊರೆಸ್ವಾಮಿ ಅವರ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಕುಮಾರಸ್ವಾಮಿ ಹುಟ್ಟಿದ್ರಾ? ಅಷ್ಟೇ ಅಲ್ಲದೆ ಊಟಕ್ಕೆ ಗತಿ ಇಲ್ಲದವರು ಸೇನೆಗೆ ಸೇರ್ತಾರೆ ಎಂದು ಹೇಳಿದ್ದ ಅವರಿಗೆ ನಾಚಿಕೆ ಆಗಬೇಕು. ಹಾಗಾದರೆ ನೀವು ಯಾಕೆ ರಾಜಕಾರಣಕ್ಕೆ ಸೇರಿದ್ರಿ? ನಿಮ್ಮದೇನಿತ್ತು ಮೂಲ? ನಿಮ್ಮ ತಂದೆಯವರು ವರ್ಕ್ ಇನ್ಸ್‌ ಪೆಕ್ಟರ್ ಇದ್ರಾ? ನಿಮಗೆ ಸಾವಿರಾರು ಕೋಟಿ ಹೇಗೆ ಬಂತು? ನನ್ನ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆ ಎಲ್ಲಿದೆ ಎಂದು ಪ್ರಶ್ನಿಸಿ ಕುಮಾರಸ್ವಾಮಿ ವಿರುದ್ಧ ಗುಡುಗಿದರು. ನಿಮ್ಮ ತಂದೆ, ಜೆಡಿಎಸ್ ವರಿಷ್ಠ ಎಚ್.ಡಿ.ದೇವಗೌಡ ಅವರೇನದಾರು ಸ್ವಾತಂತ್ರ್ಯ ಸೈನಿಕರೇ? ರಾಜಕಾರಣಿಗಳಲ್ಲಿ ಹೊಂದಾಣಿಕೆ ಇರಬಹುದು.ಆದ್ರೆ ನಾನು ಆಗಲ್ಲ. 
 
ವೀರ ಸಾವರ್ಕರ್ ಅವರಷ್ಟು ದೊರೆಸ್ವಾಮಿ ಅವರು ಲಾಠಿ ಏಟು ತಿಂದಿದ್ದಾರಾ? ಅವರು ಯಾವ ವಯಸ್ಸಿನಲ್ಲಿ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿರಬಹುದು ಎಂದು ದೊರೆಸ್ವಾಮಿ ಅವರ ವಿರುದ್ಧೆ ಮತ್ತೊಮ್ಮೆ ಹರಿಹಾಯ್ದರು. ಪ್ರಧಾನಿ ನರೇಂದ್ರ ಮೋದಿ, ಸಾವರ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಕಾಂಗ್ರೆಸ್ ಮೊದಲು ಕ್ಷಮೆ ಬೇಡಲಿ. ರಾತ್ರಿ ಒಂದು, ಬೆಳಗ್ಗೆ ಒಂದು ಮಾತನಾಡುವ ಚಟ ಇರುವ ರಾಜಕಾರಣಿ ನಾನಲ್ಲ ಎಂದು ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದರು.

మరింత సమాచారం తెలుసుకోండి: