ಮಾನ್ಯ ಮುಖ್ಯಮಂತ್ರಿಗಳೇ,

 

ಕೊರೊನಾ ತಡೆಯುವುದಕ್ಕೆ ಇಡೀ ರಾಜ್ಯದ ಎಲ್ಲಾ ಸಾರ್ವಜನಿಕ ಸ್ಥಳಗಳನ್ನು ಮುಚ್ಚುವ ನಿರ್ಧಾರವನ್ನು ದಯವಿಟ್ಟು ಹಿಂಪಡೆಯಿರಿ. ಈಗಾಗಲೇ ನಮ್ಮ ಜನರು ಕೆಲಸವಿಲ್ಲದೆ ಕಷ್ಟದಲ್ಲಿದ್ದಾರೆ, ಅಂತಲ್ಲಿ ಇಡೀ ರಾಜ್ಯದ ಆರ್ಥಿಕ ಚಟುವಟಿಕೆಗಳಿಗೆ ಭಾರೀ ಹೊಡೆತ ನೀಡುವ ಈ ನಿರ್ಧಾರ ಸಾಧುವಲ್ಲ, ಅಗತ್ಯವೂ ಇಲ್ಲ.

 

 

ಅದರ ಬದಲಿಗೆ, ಕೊರೊನಾ ಅಂದರೆ ಏನು, ಅದರ ಲಕ್ಷಣಗಳೇನು, ಹರಡುವುದು ಹೇಗೆ, ರೋಗ ತಗಲಿದವರನ್ನು ಹೇಗೆ ಆರೈಕೆ ಮಾಡಬೇಕು, ಯಾರನ್ನು ಮನೆಯಲ್ಲೇ ನೋಡಿಕೊಳ್ಳಬೇಕು(ಬಹುದು), ಯಾರನ್ನು ಆಸ್ಪತ್ರೆಗೆ ತರಬೇಕು, ಮನೆಯಲ್ಲಿ ಆರೈಕೆ ಮಾಡುವುದಿದ್ದರೆ ರೋಗಿ ಹಾಗೂ ಮನೆಯವರು ಯಾವ ಜಾಗ್ರತೆ ವಹಿಸಬೇಕು ಎಂಬ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ರಾಜ್ಯದ ಜನರಿಗೆ ಈ ಕೂಡಲೇ ತಲುಪಿಸಲು ವ್ಯವಸ್ಥೆ ಮಾಡಿ. 

 

 

ಜೊತೆಗೆ, ಸೋಂಕು ಹರಡಿದಾಗ ಹಲವರು ಆಸ್ಪತ್ರೆಗಳಿಗೆ ದಾಖಲಾಗಬೇಕಾದ ಅಗತ್ಯವುಂಟಾಗಬಹುದು, ಕೆಲವರಿಗೆ ಕೃತಕ ಉಸಿರಾಟದ ಅಗತ್ಯವೂ ಬರಬಹುದು. ಅದನ್ನು ನಿಭಾಯಿಸಲು ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಸೂಕ್ತ ವ್ಯವಸ್ಥೆಗಳನ್ನು ಈ ಕೂಡಲೇ ಒದಗಿಸಿ, ಹಾಗೂ ಅಂತಹ ರೋಗಿಗಳ ಚಿಕಿತ್ಸೆಗಾಗಿಯೇ ಕೆಲವು ಆಸ್ಪತ್ರೆಗಳನ್ನು ಪ್ರತ್ಯೇಕವಾಗಿಡುವುದು ಒಳ್ಳೆಯದು.

 

 

ಸೋಂಕು ತಗಲಿದವರ ಸಂಪರ್ಕಕ್ಕೆ ಬಂದು, ಸೋಂಕಿನ ಲಕ್ಷಣಗಳಿದ್ದವರು ಸಮೀಪದ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಿರಿ. ಮನೆಯ ಸದಸ್ಯರಿಗಾಗಲೀ, ಇತರರಿಗಾಗಲೀ ಅದು ಹರಡದಂತೆ ತಾವೇ ಜವಾಬ್ದಾರಿಯಿಂದ ಎಚ್ಚರಿಕೆ ವಹಿಸಬೇಕು. 

 

ಆದಷ್ಟು ಮಟ್ಟಿಗೆ ಮನೆಯೊಳಗೆ ಒಂದೇ ಕೋಣೆಯಲ್ಲಿ ಇದ್ದು, ಆದಷ್ಟು ಕಡಿಮೆ ಜನರ ಸಂಪರ್ಕವಿರಬೇಕು, ಇತರರೊಂದಿಗೆ ಸಂಪರ್ಕದಿಂದ ಕನಿಷ್ಠ 1 ಮೀಟರ್ ದೂರವನ್ನು ಕಾಯಬೇಕು. ಕೋಣೆಯನ್ನು ದಿನಕ್ಕೊಮ್ಮೆಯಾದರೂ ಶುಚಿಕಾರಕ ಬಳಸಿ ಸ್ವಚ್ಛಗೊಳಿಸಬೇಕು. ಬಟ್ಟೆಗಳನ್ನು ಪ್ರತ್ಯೇಕವಾಗಿಟ್ಟು, 60 ಡಿಗ್ರಿ ಬಿಸಿಯಿರುವ ನೀರಲ್ಲಿ ತೊಳೆದು ಒಣಗಿಸಿಕೊಳ್ಳಬೇಕು. ಅವರ ಸಂಪರ್ಕಕ್ಕೆ ಬಂದವರು 14 ದಿನಗಳ ಕಾಲ ತಮ್ಮ ಮೇಲೆ ನಿಗಾ ವಹಿಸಿಕೊಳ್ಳಬೇಕು, ರೋಗಲಕ್ಷಣಗಳಿದ್ದರೆ ತಾವೂ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ ಎಲ್ಲಾ ಜಾಗ್ರತೆಗಳನ್ನೂ ವಹಿಸಬೇಕು. ಉಸಿರಾಟದ ಸಮಸ್ಯೆಯುಂಟಾದವರು ಕೂಡಲೇ ಆಸ್ಪತ್ರೆಗೆ ಹೋಗಬೇಕು.

 

ಸೋಂಕುಳ್ಳವರನ್ನು ನಿರ್ಬಂಧಿಸಿದರೆ ಸಾಕು, ಇಡೀ ರಾಜ್ಯವನ್ನು ನಿರ್ಬಂಧಿಸುವ ಅಗತ್ಯ ಈಗಂತೂ ಇಲ್ಲ.

 

-ಶ್ರೀನಿವಾಸ ಕಕ್ಕಿಲ್ಲಾಯ

మరింత సమాచారం తెలుసుకోండి: