ಬೆಂಗಳೂರು: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕರೋನೊ ವೈರಸ್ ಸೋಂಕಿತರ ಸಂಖ್ಯೆಗೆ ಕಡಿವಾಣ ಹಾಕುವ ಸಲುವಾಗಿ ಮಾರ್ಚ್ ೩೧ರವರೆಗೆ ಕರ್ನಾಟಕ ಲಾಕ್ ಟೌನ್ ಆದೇಶವನ್ನು ನೀಡಿದೆ. ಇದಕ್ಕೆ ಅನುಗುಣವಾಗಿ  ರಾಜ್ಯದಲ್ಲಿರುವಂತಹ ಎಲ್ಲಾ ಅಂಗಡಿ ಮುಂಗಟ್ಟುಗಳು ಹಾಗೂ ಮಾರುಕಟ್ಟೆಗಳು, ಬಸ್ ವಿಮಾನ ರೈಲ್ವೆ ಸಂಚಾರವನ್ನು ಬಂದ್ ಮಾಡಲಾಗಿದೆ. ಹಾಗೂ ಗಡಿ ಪ್ರದೇಶಗಳನ್ನು ಬಂದ್ ಮಾಡಿ ಆದೇಶ ಹೊರಡಿಸಲಾಗಿದೆ. ನಾಳೆ ಇರುವ ಯುಗಾದಿ ಹಬ್ಬದಕ್ಕೆಂದು ಅಗ್ಯ ಸಾಮಗ್ರಿಗಳನ್ನು ಕೊಳ್ಳಬೇಕೆಂದು  ಮಾರುಕಟ್ಟೆಗೆ ತೆರಳುವ ಗ್ರಾಹಕರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಏನು ಹೇಳಿದ್ದಾರೆ ಗೊತ್ತ.

 

ಯುಗಾದಿ ಹಬ್ಬದ ಖರೀದಿಗಾಗಿ ಯಾರೂ ಮಾರುಕಟ್ಟೆಗೆ ಹೋಗಿ ಜನದಟ್ಟಣೆಯಲ್ಲಿ ಸೇರಬೇಡಿ, ಸಾಧ್ಯವಾದಷ್ಟು ಮಾರ್ಚ್ ೩೧ರವರೆಗೆ ಮನೆಬಿಟ್ಟು ಹೊರಗೆ ಹೋಗಬೇಡಿ, ಅಗತ್ಯ ತುರ್ತು ಕೆಲಸಗಳಿದ್ದರೆ ಮಾತ್ರ ಹೊರಹೋಗಿ ಎಂದು ಸಿಎಂ ಯಡಿಯೂರಪ್ಪ ಮತ್ತೊಮ್ಮೆ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ.

 

ಬೆಂಗಳೂರಿನಲ್ಲಿಂದು ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಮಾರ್ಚ್ ೩೧ರವರೆಗೆ ಕರೆ ನೀಡಿರುವ ಸಂಪೂರ್ಣ ಲಾಕ್ ಡೌನ್ ಗೆ ಎಲ್ಲ ಜನರ ಸಹಕಾರ ಅತ್ಯಗತ್ಯ. ಪ್ರಧಾನ ಮಂತ್ರಿಯವರೇ ಜನರು ಮನೆಯಲ್ಲಿಯೇ ಇರುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ನಿನ್ನೆ ರಾತ್ರಿಯಿಂದ ವಿಮಾನ ಹಾರಾಟಗಳನ್ನು ನಿಷೇಧಿಸಲಾಗಿದೆ ಎಂದ ಮೇಲೆ ಪರಿಸ್ಥಿತಿಯ ಗಂಭೀರತೆ ಬಗ್ಗೆ ಜನತೆ ಅರ್ಥ ಮಾಡಿಕೊಳ್ಳಬೇಕು ಎಂದರು.

 

ರಾಜ್ಯ ಸರ್ಕಾರದ ಆದೇಶ ಉಲ್ಲಂಘಿಸಿ ಜನರು ಮನೆಬಿಟ್ಟು ಸುಖಾಸುಮ್ಮನೆ ಹೊರಗೆ ಬಂದರೆ ಪೊಲೀಸರು ಅನಿವಾರ್ಯವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಜಿಲ್ಲೆಗಳಲ್ಲಿ ಅದರಲ್ಲೂ ಬೆಂಗಳೂರು ಮಹಾನಗರ ಜನತೆಗೆ ಈ ಸಂದರ್ಭದಲ್ಲಿ ನಾನು ಅಂತಿಮ ಎಚ್ಚರಿಕೆ ಮತ್ತು ಮನವಿ ಮಾಡಿಕೊಳ್ಳುತ್ತಿದ್ದೇನೆ, ಸಾಧ್ಯವಾದಷ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಕೊರೋನಾ ವೈರಸ್ ನಿಯಂತ್ರಣಕ್ಕೆ ನಾವು ಸಾಧ್ಯವಾದಷ್ಟು ಎಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ. ಅಷ್ಟಕ್ಕೂ ನಿಯಮ ಉಲ್ಲಂಘಿಸಿದವರ ಮೇಲೆ ಪೊಲೀಸರು ಕ್ರಮ ಕೈಗೊಂಡರೆ ರಾಜ್ಯ ಸರ್ಕಾರ ಅಥನಾ ನನ್ನನ್ನು ದೂಷಿಸಬೇಡಿ ಎಂದು ಎಚ್ಚರಿಕೆ ನೀಡಿದರು.

 

ಇಷ್ಟಾದರೂ ಕೂಡ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಮಾರುಕಟ್ಟೆಗಳಲ್ಲಿ ವ್ಯಪಾರ ವಹಿ ವಾಡುಗಳು ಎಂದಿನಂತೆ ನಡೆಯುತ್ತಿರುವುದು ಜನರಿಗೆ ಕರೋನಾ ವೈರಸ್ ಬಗ್ಗೆ ಜಾಗೃತಿಯೇ ಇಲ್ಲವೇನೋ ಎಂಬ ಅನುಮಾನ ಕಾಡುತ್ತಿದೆ.

మరింత సమాచారం తెలుసుకోండి: