ಬೆಂಗಳೂರು: ಕೋರೊನಾ ವೈರಸ್ ಇಡೀ ದೇಶದಾದ್ಯಂತ ಹರಡಿಕೊಂಡಿರುವ ಹಿನ್ನಲೆಯಲ್ಲಿ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ ಇದರಿಂದ ಕೃಷಿ ಪದಾರ್ಥಗಳು ಅಂದು ಕೊಂಡಷ್ಟು ಮಾರಾಟವಾಗದೇ ರೈತರು ಬೆಳೆದ ಬೆಳೆಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಸಿಕ್ಕ ಬೆಲೆಗಾದರೂ ಮಾರೋಣವೆಂದರೆ ಮಾರುಕಟ್ಟೆಗಳನ್ನು ಬಂದ್ ಮಾಡಿರುವುದರಿಂದ  ತಾವು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲಾಗದೇ ಬೆಳೆದ ಬೆಳೆಗಳನ್ನು ಹೊಲದಲ್ಲಿಯೇ ನಾಶ ಪಡಿಸುತ್ತಿದ್ದಾರೆ. ಇದಕ್ಕೆ ಸೂಕ್ತವಾದ ಕ್ರಮವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ ಅಷ್ಟಕೂ ಆ ಕ್ರಮ ಏನು ಗೊತ್ತಾ?

 

 

ರೈತರು ಬೆಳೆದ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲು ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಜತೆಗೆ ಗುರುವಾರದಿಂದ ಬಡವರಿಗೆ ಉಚಿತವಾಗಿ ಕೆಎಂಎಫ್ ಹಾಲು ನೀಡಲಾಗುವುದು. ೭ ಲಕ್ಷ ಲೀಟರ್ ಹಾಲನ್ನು ಸರಕಾರವೇ ಖರೀದಿಸಿ ಕೊಳಚೆ ಪ್ರದೇಶಗಳು ಮತ್ತು ಬಡಜನರು ವಾಸಿಸುವ ಪ್ರದೇಶಗಳಲ್ಲಿ ಉಚಿತವಾಗಿ ಎ.೧೪ರವರೆಗೆ ಹಾಲು ವಿತರಿಸಲಾಗುವುದು ಎಂದು ಅಭಯ ನೀಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಪ್ಕಾಮ್ಸ್ ಮೂಲಕವೂ ಖರೀದಿಸಲಾಗುವುದು ಎಂದು ತಿಳಿಸಿದ್ದಾರೆ.

 

ಕೃಷಿ, ತೋಟಗಾರಿಕೆ, ಕಂದಾಯ, ಸಹಕಾರ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರ ಜತೆ ಬುಧವಾರ ಮಹತ್ವದ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರೈತರ ಬೆಳೆ ಖರೀದಿಗೆ ಯಾವುದೇ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ರೈತರು ಮತ್ತು ಗ್ರಾಹಕರ ಹಿತ ಕಾಪಾಡಲಾಗುವುದು ಎಂದರು.

 

 

ಹಾಪ್ ಕಾಮ್ಸ್ ನಲ್ಲಿ ಟೊಮೊಟೊ, ದ್ರಾಕ್ಷಿ, ಕಲ್ಲಂಗಡಿ ಹಾಗೂ ಕೋಳಿ ಮೊಟ್ಟೆ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ರೈಲುಗಳ ಮೂಲಕ ಹೊರ ರಾಜ್ಯಗಳಿಗೆ ಹಣ್ಣು ಹಂಪಲು ತರಕಾರಿ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು. ಅಡುಗೆ ಎಣ್ಣೆ ಸಹಿತ ಅಗತ್ಯ ವಸ್ತುಗಳ ಕೊರತೆಯಿಲ್ಲ. ಜನ ಆತಂಕಪಡುವ ಅಗತ್ಯವಿಲ್ಲ. ಅಗತ್ಯ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಅಕ್ಕಿ ಗಿರಣಿ ಆರಂಭಿಸಲು ಮತ್ತು ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಬಿಲ್ಡರುಗಳೇ ಊಟ, ವಸತಿ ವ್ಯವಸ್ಥೆ ಒದಗಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

 

 

ವಿಧವಾ ವೇತನ, ವೃದ್ಧಾಪ್ಯ ವೇತನವನ್ನು ೨ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು. ಕಲಬುರಗಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ೫ ಲ.ರೂ. ಪರಿಹಾರ ನೀಡಲಾಗುವುದು ಎಂದು ಹೇಳಿದರು.

 

 

ಬೆಳೆ ನಾಶ ಮಾಡಬೇಡಿ: ಕೃಷಿ ಸಚಿವ ಬಿ.ಸಿ.ಪಾಟೀಲ್

 

ರೈತರು ಅಪಪ್ರಚಾರ ನಂಬಿ ಬೆಳೆಗಳನ್ನು ರಸ್ತೆಗೆ ಚೆಲ್ಲುವುದಾಗಲಿ, ನಾಶ ಮಾಡುವುದಾಗಲಿ ಮಾಡಬಾರದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಮನವಿ ಮಾಡಿದ್ದಾರೆ. ರೈತರು ಇಲಾಖೆಯ ಸೂಚನೆ ಪಾಲಿಸಿಬೇಕು. ರಾಯಚೂರು ಸೇರಿ ಇನ್ನಿತರ ಭಾಗಗಳಲ್ಲಿ ತತ್ಕ್ಷಣವೇ ಬೆಳೆ ಸಮೀಕ್ಷೆ ಕೈಗೊಳ್ಳುವಂತೆ ಸೂಚಿಸಲಾಗಿದೆ. ರೈತರಿಗೆ ಬೇಕಾದ ಬೀಜ, ಗೊಬ್ಬರ, ಔಷಧ ಮಾರಾಟಕ್ಕೆ ಮುಕ್ತ ಅವ ಕಾಶ ನೀಡಲಾಗಿದೆ. ಮುಂಗಾರು ಬಿತ್ತನೆಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

 

మరింత సమాచారం తెలుసుకోండి: