ಕೊರೋನಾ ವೈರಸ್ ತಡೆಯುವ ಉದ್ದೇಶದಿಂದ ದೇಶದಾದ್ಯಂತ ಏಪ್ರಿಲ್ 12 ರವರೆಗೆ ಲಾಕ್ ಡೌನ್ ಮಾಡಲಾಗಿದೆ ಈ ಲಾಕ್ ಡೌನ್ ಅನ್ನು ಮುಂದುವರೆಸುವುದೋ ಬೇಡವೋ ಎಂಬುದಕ್ಕೆ ರಾಜ್ಯ ಸರ್ಕಾರ ತಜ್ಞರ ತಂಡವೊಂದನ್ನು ರಚನೆ ಮಾಡಿತ್ತು. ಇದೀಗ ಈ ತಂಡ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಅಷ್ಟಕ್ಕೂ ಈ ವರದಿಯಲ್ಲಿ ಇರುವ ಅಂಶಗಳೇನು ಗೊತ್ತಾ...?

 

ಕರೋನಾ ಸೋಂಕಿತರನ್ನು ನಿಯಂತ್ರಣ ಮಾಡಲು ಲಾಕ್ಡೌನ್ ಬೇಕೇ? ಬೇಡವೇ? ಎನ್ನುವ ಬಗ್ಗೆ ರಾಜ್ಯ ಸರ್ಕಾರ ತಜ್ಞರ ಸಮಿತಿ ರಚನೆ ಮಾಡಿತ್ತು. ಇದೀಗ ತಜ್ಞರ ಸಮಿತಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿದೆ. ಲಾಕ್ ಡೌನ್ ಮುಂದುವರಿಕೆ ಬಗ್ಗೆ ಸರ್ಕಾರಕ್ಕೆ ಶಿಫಾರಸು ಕೊಟ್ಟ ಬಳಿಕ ಕೋವಿಡ್ - 19 ಟಾಸ್ಕ್ ಫೋರ್ಸ್ ವೈದ್ಯರ ಶಿಫಾರಸ್ಸಿನ ಬಗ್ಗೆ ಮುಖ್ಯಮಂತ್ರಿ ಸಭೆ ನಡೆಸಿದ್ದು, ತಜ್ಞರ ವರದಿ ಮೇಲೆ ಕೈಗೊಳ್ಳಬೇಕಾದ ಅಂಶಗಳ ಬಗ್ಗೆ ಚರ್ಚೆ ನಡೆಸಿದರು.

 

ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಾರಾಯಣ ಹೃದ್ರೋಗ ಸಂಸ್ಥೆಯ ಡಾ. ದೇವಿ ಶೆಟ್ಟಿ, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ ಮಂಜುನಾಥ್, ರಾಜೀವ್ ಗಾಂಧಿ ಆಸ್ಪತ್ರೆಯ ಡಾ. ನಾಗರಾಜ್, ಡಾ. ರವಿ ಹಾಗೂ ಡಾ. ಸುದರ್ಶನ್, ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯ್ ಭಾಸ್ಕರ್, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ ಭಾಗಿಯಾಗಿದ್ದರು. ಸಮಿತಿ ಕೊಟ್ಟಿರುವ ಶಿಫಾರಸ್ಸಿನ ಬಗ್ಗೆ ಚರ್ಚೆ ನಡೆಸಿದ್ದು, ಏಪ್ರಿಲ್ ಅಂತ್ಯದ ವರೆಗೆ ಲಾಕ್ ಡೌನ್ ಮುಂದುವರಿಕೆಗೆ ಶಿಫಾರಸು ಮಾಡಲಾಗಿದೆ. ಇದನ್ನು ಹೇಗೆ ಜಾರಿ ಮಾಡುವುದು ಎನ್ನುವ ಬಗ್ಗೆ ಮಹತ್ವದ ಮಾತುಕತೆ ನಡೆಸಲಾಯ್ತು.

 

ಲಾಕ್ಡೌನ್ ಮಾಡಿದರೂ ಇಡೀ ರಾಜ್ಯವನ್ನೇ ಲಾಕ್ಡೌನ್ ಮಾಡುವ ಬದಲು ಕೋವಿಡ್ - 19 ಪ್ರಕರಣ ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಲಾಕ್ಡೌನ್ ಮುಂದುವರಿಕೆಗೆ ಶಿಫಾರಸು ಮಾಡಲಾಗಿದೆ. ಆದರ ಜೊತೆಗೆ ಸದ್ಯ ಉಳಿದಿರುವ ದಿನಗಳನ್ನು ರಾಜ್ಯದಲ್ಲಿ ಕಟ್ಟು ನಿಟ್ಟಾಗಿ ಲಾಕ್ಡೌನ್ ಜಾರಿಗೆ ತರಬೇಕು. ಮತ್ತಷ್ಟು ಕಠಿಣವಾಗಿ ಲಾಕ್ ಡೌನ್ ಜಾರಿ ಆದರೆ ಕೋವಿಡ್ - 19 ಸೋಂಕಿತರ ಪ್ರಮಾಣ ತಗ್ಗಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳಲಿ, ಎಂದು ಶಿಫಾರಸ್ಸಿನಲ್ಲಿ ತಿಳಿಸಲಾಗಿದೆ. ಸಮಿತಿ ಸಲ್ಲಿಸಿರುವ ವರದಿಯ ಪ್ರಮುಖ ಅಂಶಗಳು ಈ ಕೆಳಗಿನಂತಿವೆ

 

1.ಕರೋನಾ ಹಾಟ್ ಸ್ಟಾಟ್ ಜಿಲ್ಲೆಗಳಲ್ಲಿ ಏಪ್ರಿಲ್ ೩೦ ವರೆಗೆ ಲಾಕ್ ಡೌನ್

2.ಸೋಂಕಿತರಿಲ್ಲದ ಜಿಲ್ಲೆಗಳಲ್ಲಿ ಸ್ವಲ್ಪ ರಿಯಾಯಿತಿ ಕೊಡಬಹುದು

3.ಆದ್ರೆ ಪಕ್ಕದ ಜಿಲ್ಲೆಗೆ ಯಾರೂ ಸಂಚಾರ ಮಾಡದಂತೆ ಎಚ್ಚರ ಅಗತ್ಯ

4.ಬಸ್, ಟ್ರೈನ್, ವಿಮಾನ ಸಂಚಾರ ಸ್ಥಗಿತ ಮುಂದುವರಿಯಬೇಕು

5.ಮೆಟ್ರೋ ಸಂಚಾರ ಸ್ಥಗಿತ ಹೀಗೆಯೇ ಮುಂದುವರಿಯಲಿ

6.ಸದ್ಯಕ್ಕೆ ಸಾರ್ವಜನಿಕ ಶೌಚಾಲಯಗಳ ಬಳಕೆ ಬೇಡ

  1. 7. ಗುಟ್ಕ, ಚ್ಯೂಯಿಂಗ್ ಗಮ್ ಸದ್ಯಕ್ಕೆ ಬ್ಯಾನ್ ಮಾಡಬೇಕು

8.ಅಂತರ್ ಜಿಲ್ಲಾ ಬಸ್, ಕಾರ್ ಸೇರಿ ವಾಹನ ಸಂಚಾರ ಸ್ಥಗಿತ ಆಗ್ಬೇಕು

9 ಗೂಡ್ಸ್, ಮೆಡಿಕಲ್ ವಾಹನಗಳ ಸಂಚಾರಕ್ಕೆ ವಿನಾಯಿತಿ ಇರಬೇಕು

10.ಕೋವಿಡ್ -೧೯ ಪರೀಕ್ಷೆ ಮಾಡೋ ಪ್ರಮಾಣ ಹೆಚ್ಚಳ ಮಾಡಬೇಕು

11.೩ - ೪ ವಾರದಲ್ಲಿ ೫೦ ಸಾವಿರಕ್ಕೂ ಹೆಚ್ಚು ತಪಾಸಣೆ ಆಗಬೇಕು

12.ಖಾಸಗಿ ವಾಹನಗಳ ಓಡಾಟಕ್ಕೆ ಸರಿ-ಬೆಸ ಸಂಖ್ಯೆಯ ಸೂತ್ರ ಬಳಸಿ

  1. 13. ಎಸಿ ಇಲ್ಲದ ಎಲ್ಲ ಅಂಗಡಿಗಳನ್ನು ತೆರೆಯಲು ಅವಕಾಶ ಕೊಡಿ

14.ಮುಂದಿನ ೬ ತಿಂಗಳ ಕಾಲ ಬಹಳ ಎಚ್ಚರಿಕೆಯಿಂದ ಇರಬೇಕು

  1. 15. ಜನರ ಅನಾವಶ್ಯಕ ಓಡಾಟಕ್ಕೆ ಕಡಿವಾಣ ಹಾಕಬೇಕು

 

ಇನ್ನು ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಸಭೆ ಕರೆದಿದ್ದು, ಆ ಸಭೆಯಲ್ಲಿ ಏನೆಲ್ಲಾ ಸಲಹೆ ಸೂಚನೆಗಳನ್ನು ಕೊಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಇನ್ನೊಂದು ವಾರ ಕಾಲ ರಾಜ್ಯದಲ್ಲಿ ಯಾವ ರೀತಿ ಕೋವಿಡ್ - 19 ನಿಯಂತ್ರಣಕ್ಕೆ ಬರುತ್ತೆ ಎನ್ನುವ ಲೆಕ್ಕಾಚಾರದ ಮೇಲೆ ಲಾಕ್ಡೌನ್ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಲಾಯಿತು.

 

ಕೊನೆಗೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಹಾಗೂ ಸಮಿತಿಯ ಶಿಫಾರಸುಗಳನ್ನು ಪರಿಶೀಲಿಸಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಅಂತಿಮವಾಗಿ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿ ಇರೋಣ ಎನ್ನುವ ಒಂದು ಸಾಲಿನ ನಿರ್ಣಯಕ್ಕೆ ಬರಲಾಗಿದೆ ಎನ್ನಲಾಗ್ತಿದೆ.

 

 

మరింత సమాచారం తెలుసుకోండి: