ದೇಶಕ್ಕೆ ಅನ್ನವನ್ನು ನೀಡುವ ರೈತನ ಬಾಳು ಬಹಳ ಕಷ್ಟಸಾಧ್ಯವಾಗಿ ಸಾಲದ ಸುಳಿಯಲ್ಲಿ ಸಿಲುಕಿ ಪ್ರತಿನಿತ್ಯ ನರಳುತ್ತಿದ್ದಾರೆ ಇದನ್ನು ಅರಿತ ಕೇಂದ್ರ ಸರ್ಕಾರ, ಕೃಷಿ ವಲಯದಲ್ಲಿ ಹಗಲಿರುಳೂ ನಿರತವಾಗಿರುವ ಉಳುವ ಯೋಗಿಯ ಯೋಗಕ್ಷೇಮಕ್ಕಾಗಿ, ಅವರು ಮಾಡುವ ಕೆಲಸಕ್ಕೆ ತಕ್ಕ ದುಡಿಮೆಯನ್ನು ತಂದುಕೊಡಲಿಕ್ಕಾಗಿ ಹೊಸ ಹೆಜ್ಜೆಯನ್ನು ಇಟ್ಟಿದೆ. ಈ ಮೂಲಕ ಕೃಷಿಯನ್ನು ಲಾಭದಾಯಕ ಉದ್ದಿಮೆಯನ್ನಾಗಿಸಿ, ಯುವ ಪೀಳಿಗೆಯನ್ನು ಕೃಷಿ, ಕೃಷಿ ಸಂಬಂಧಿ ಉದ್ಯಮಗಳತ್ತ ಸೆಳೆಯಲೂ ಕ್ರಮ ಕೈಗೊಂಡಿದೆ ಅಷ್ಟಕ್ಕೂ ಕೃಷಿ ಕ್ಷೇತ್ರಕ್ಕೆ ಪ್ಯಾಕೇಜ್ ನಲ್ಲಿ ದೊರೆತ ಪಾಲೆಷ್ಟು ಗೊತ್ತಾ..?

 

ಹೌದು, ಇತ್ತೀಚಿನ ದಶಕಗಳಲ್ಲಿ ರೈತರ ಪರಿಸ್ಥಿತಿ ತೀರಾ ಹೈರಾಣಾಗಿದ್ದು ಸುಳ್ಳಲ್ಲ. ಇದಕ್ಕೆ ನಿಸರ್ಗದ ಮೇಲೆ ಮಾನವ ಎಸಗಿದ ತಪ್ಪುಗಳು ಒಂದು ಕಾರಣವಾದರೆ, ಸರ್ಕಾರದ ದೂರದೃಷ್ಟಿಯಿಲ್ಲದ ನಡೆಗಳು, ಗೊತ್ತುಗುರಿಯಿಲ್ಲದ ಯೋಜನೆಗಳು ಮುಂತಾದವು ರೈತರ ಬದುಕನ್ನು ಮೂರಾಬಟ್ಟೆಯಾಗಿಸಿದ್ದವು. ರೈತರನ್ನು ಸಂಕಷ್ಟಗಳಿಂದ ಪಾರು ಮಾಡಲು ಸರ್ಕಾರಗಳು ನಾನಾ ಯೋಜನೆಗಳನ್ನು ಜಾರಿಗೊಳಿಸಿವೆಯಾದರೂ, ಅವುಗಳು ಕೆಲವು ಯಶಸ್ವಿಯಾದರೆ, ಕೆಲವು ಹೆಸರಿಗೆ ಮಾತ್ರ ಯೋಜನೆಗಳು ಎನ್ನುವಂತಾಗಿದ್ದು ಸುಳ್ಳಲ್ಲ.

ಇದೆಲ್ಲವನ್ನೂ ಆಮೂಲಾಗ್ರವಾಗಿ ಅಧ್ಯಯನ ಮಾಡಿ, ರೈತರ ಸಮಸ್ಯೆಗಳಿಗೆ ಒಂದು ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆಯಿಡಲಾಗಿದೆ. ಕೇವಲ ರೈತರಿಗೆ ಸಾಲ ನೀಡುವುದರಿಂದ ಏನೂ ಬದಲಾವಣೆ ಸಾಧ್ಯವಿಲ್ಲ ಎಂಬುದನ್ನು ತಿಳಿದಿರುವ ಕೇಂದ್ರ ಸರಕಾರ, ಕೃಷಿಗೆ ಸಮಾನಾಂತರವಾಗಿರುವ ಅಥವಾ ಕೃಷಿಗೆ ಸಹಾಯಕವಾಗಿರುವ ಕ್ಷೇತ್ರಗಳ ಅಭಿವೃದ್ಧಿಗೂ ಕೈ ಹಾಕಲಾಗಿದೆ.

ಕೃಷಿ ಮೂಲ ಸೌಕರ್ಯಾಭಿವೃದ್ಧಿಗೆ 1 ಲಕ್ಷ ಕೋಟಿ ರೂ. ಮೀಸಲಿಡಲು ತೀರ್ಮಾನಿಸಲಾಗಿದ್ದು, ಅದರ ಜೊತೆಯಲ್ಲೇ ಆಹಾರ ಸಂಸ್ಕರಣೆ ಕ್ಷೇತ್ರ, ಮೀನುಗಾರಿಕೆ, ಹೈನುಗಾರಿಕೆಗಳ ಅಭಿವೃದ್ಧಿಗೆ ಯೋಜನೆಗಳನ್ನು ಪ್ರಕಟಿಸಲಾಗಿದೆ. ಸ್ಥಳೀಯವಾಗಿ ಸಿಗುವ ಕೃಷಿ ಉತ್ಪನ್ನಗಳಿಗೆ ಜಾಗತಿಕ ಬ್ರಾಂಡ್‌ ಮೌಲ್ಯವನ್ನು ತಂದುಕೊಡಲು ಕ್ರಮ ಕೈಗೊಳ್ಳಲಾಗಿದೆ. ಮತ್ತೂಂದೆಡೆ, ಜೇನು ಕೃಷಿ, ಗಿಡಮೂಲಿಕೆ ಕೃಷಿಯಲ್ಲಿ ತೊಡಗಿಸಿಕೊಳ್ಳುವ ರೈತರ ಮೊಗದಲ್ಲಿ ಮಂದಹಾಸ ತರಿಸುವ ಪ್ರಯತ್ನ ಮಾಡಲಾಗಿದೆ.

 

ಇದರ ಜೊತೆಗೆ, ರೈತರ ಬೆಳೆಗಳ ಮಾರಾಟಕ್ಕೆ ಇದ್ದ ಅಡ್ಡಿಯಾದ ಲೈಸನ್ಸ್‌ – ಪರ್ಮಿಟ್‌ಗಳ ಸಂಸ್ಕೃತಿಯನ್ನು ಬದಲಾವಣೆ ಮಾಡಿ, ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಸರಾಗವಾಗಿ ತಂದು ಮಾರಾಟ ಮಾಡಿ, ಉತ್ತಮ ಲಾಭ ಗಳಿಸಲು, ತಾವು ಬೆಳೆದ ಬೆಳೆಗಳನ್ನು ರಾಜ್ಯದಿಂದ ರಾಜ್ಯಕ್ಕೆ ಕೊಂಡೊಯ್ದು ಸರಾಗವಾಗಿ ಮಾರಾಟ ಮಾಡುವಂಥ ಅನುಕೂಲಗಳನ್ನೂ ಕಲ್ಪಿಸಲು ತೀರ್ಮಾನಿಸಲಾಗಿದೆ. ಅದಕ್ಕಾಗಿ ಅಗತ್ಯ ಪದಾರ್ಥಗಳ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ.

 

ಇದರ ಜೊತೆಗೆ, ರೈತರು ಯಾವ ಹವಾಮಾನದಲ್ಲಿ ಯಾವ ಬೆಳೆ ಬೆಳೆದರೆ ಚೆನ್ನ, ಯಾವ ಬೆಳೆಗೆ ಮಾರುಕಟ್ಟೆಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ಉತ್ತಮ ಬೆಲೆ ಬರುತ್ತದೆ, ಯಾವ ರೀತಿಯ ಬೆಳೆ ಬೆಳೆದರೆ ಉತ್ತಮ ಲಾಭ ಗಳಿಸಬಹುದು ಅಥವಾ ಈಗ ಬೆಳೆದಿರುವ ಬೆಳೆಯ ಗುಣಮಟ್ಟವನ್ನು ಎಷ್ಟರ ಮಟ್ಟಿಗೆ ಕಾಪಾಡಿಕೊಂಡರೆ ಅವು ಉತ್ತಮ ಬೆಲೆಗೆ ಮಾರಾಟವಾಗುತ್ತವೆ ಎಂಬಿತ್ಯಾದಿ ಮಾಹಿತಿಗಳು ರೈತನಿಗೆ ಮೊದಲೇ ಸಿಗುವಂತೆ ಮಾಡಲು ರಾಷ್ಟ್ರೀಯ ನೀತಿಯೊಂದನ್ನು ರೂಪಿಸಲು ನಿರ್ಧರಿಸಲಾಗಿದೆ. ಇವೆಲ್ಲವುಗಳಿಂದ ಮುಂದಿನ ದಿನಗಳಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಇದು ಖಂಡಿತವಾಗಿಯೂ ಮಹತ್ವದ ಪಾತ್ರ ವಹಿಸಲಿದೆ.

ರೋಗ ನಿಯಂತ್ರಣಕ್ಕೆ ಯೋಜನೆ


ಪ್ರಾಣಿಗಳಿಗೆ ರೋಗಗಳು ಸಾಮಾನ್ಯ. ಅದರಲ್ಲೂ ಅವನ್ನು ತಡೆಗಟ್ಟದಿದ್ದರೆ ಅವುಗಳಿಂದ ಮನುಷ್ಯನಿಗೂ ಹಬ್ಬಿಕೊಳ್ಳುವ ಸಾಧ್ಯತೆಯಿರುತ್ತದೆ. ಅದರಲ್ಲೂ ನಮಗೆ ಹಾಲು ನೀಡುವ ಹಸು, ಎಮ್ಮೆಗಳ ಆರೋಗ್ಯದ ಬಗ್ಗೆ ಕಾಳಜಿಯಿರಲೇಬೇಕು. ಆದ್ದರಿಂದ ರಾಷ್ಟ್ರೀಯ ಪ್ರಾಣಿರೋಗ ನಿಯಂತ್ರಣ ಕಾರ್ಯಕ್ರಮವನ್ನು ಕೇಂದ್ರ ಜಾರಿ ಮಾಡಿದೆ.

ಬಾಯಿ, ಕಾಲು ಹಾಗೂ ಜ್ವರದ ನಿಯಂತ್ರಣಕ್ಕೆ 13,343 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಈ ಯೋಜನೆಯಲ್ಲಿ ಹಸು, ಎಮ್ಮೆ, ಕುರಿ, ಮೇಕೆ, ಹಂದಿ ಸೇರಿ ಒಟ್ಟು 53 ಕೋಟಿ ಪ್ರಾಣಿಗಳನ್ನು ರೋಗ ನಿಯಂತ್ರಣಕ್ಕೊಳಪಡಿಸಲಾಗುತ್ತದೆ. ಅಂದರೆ ಪಾದ, ಬಾಯಿ ಹಾಗೂ ಬ್ರೂಸೆಲ್ಲಾಸಿಸ್‌ ಎಂಬ ಜ್ವರ ನಿ ಯಂತ್ರಣದ ಔಷಧ ನೀಡಲಾಗುತ್ತದೆ. ಇದುವರೆಗೆ 1.5 ಕೋಟಿ ಹಸುಗಳು ಹಾಗೂ ಎಮ್ಮೆಗಳನ್ನು ಗುರ್ತಿಸಿ, ಅವಕ್ಕೆ ಔಷಧ ನೀಡಲಾಗಿದೆ.

 

ಹೈನುಗಾರಿಕೆಗೆ ಉತ್ತೇಜನ


ಗರಿಷ್ಠ ಪ್ರಮಾಣದಲ್ಲಿ ಹಾಲು ಉತ್ಪಾದಿಸಲು ದೇಶದ ಹಲವಾರು ಕಡೆ, ಖಾಸಗಿ ಹೂಡಿಕೆಗೆ ಅವಕಾಶವಿದೆ. ಈ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದರಿಂದ ಉದ್ಯಮವೂ ಬೆಳೆಯುತ್ತದೆ, ವೃತ್ತಿಪರತೆಯೂ ಬರುತ್ತದೆ, ಉದ್ಯೋಗಾವಕಾಶಗಳೂ ಹೆಚ್ಚುತ್ತವೆ. ಇಂತಹ ಹೂಡಿಕೆಗಳಿಗೆ ಬೆಂಬಲ ನೀಡುವ ಉದ್ದೇಶ ಕೇಂದ್ರದ ಮುಂದಿದೆ. ಅಂದರೆ ಪಶು ಸಂಗೋಪನೆಯನ್ನು ಪ್ರೋತ್ಸಾಹಿಸುವುದು ಸರ್ಕಾರದ ಉದ್ದೇಶ.

ಹಾಲು ಉತ್ಪನ್ನಗಳ ಸಂಸ್ಕರಣೆ, ಗುಣಮಟ್ಟ ವೃದ್ಧಿ, ಹಸುವಿನ ಆಹಾರ ತಯಾರಿ ಮೂಲಸೌಕರ್ಯಗಳು, ಇವೆಲ್ಲ ಸದ್ಯ ಖಾಸಗಿ ಹೂಡಿಕೆ ಮಾಡಬಹುದಾದ ಕ್ಷೇತ್ರಗಳು. ಇದಕ್ಕಾಗಿ ಪಶು ಸಂಗೋಪನೆ ಅಭಿವೃದ್ಧಿ ನಿಧಿಯಾಗಿ 15,000 ಕೋಟಿ ರೂ.ಗಳನ್ನು ಎತ್ತಿಡಲಾಗುತ್ತದೆ. ಪ್ರಾಣಿ ಸಾಕಣೆ ಕೇಂದ್ರ ನಿರ್ಮಾಣಕ್ಕೆ ಬೇಕಾದ ವಸ್ತುಗಳನ್ನು ರಫ್ತು ಮಾಡಲು, ಜಾಗ ಸಿದ್ಧ ಮಾಡುವವರಿಗೆ ಪ್ರೋತ್ಸಾಹವನ್ನೂ ನೀಡಲಾಗುತ್ತದೆ.

 

ಆಹಾರ ಸಂಸ್ಕರಣೆಗೆ ಪುನಶ್ಚೇತನ
ಮೊನ್ನೆ ಮೊನ್ನೆ ಪ್ರಧಾನಿ ಮೋದಿ, ವೋಕಲ್‌ ಫಾರ್‌ ಲೋಕಲ್‌ ಎಂದಿದ್ದರು. ಆ ಮೂಲಕ, ಸ್ಥಳೀಯ ಉತ್ಪನ್ನಗಳನ್ನು ಇನ್ನು ಗ್ಲೋಬಲ್‌ ಬ್ರಾಂಡ್‌ ಮಾಡಲು ಎಲ್ಲರೂ ಶ್ರಮಿಸಬೇಕೆಂದು ಕರೆ ನೀಡಿದ್ದರು. ಅದರನ್ವಯ, ಸ್ಥಳೀಯವಾಗಿ ಆಹಾರ ಸಿದ್ಧಪಡಿಸುವ ಎಂಎಫ್‌ಇಗಳಿಗೆ (ಸೂಕ್ಷ್ಮಆಹಾರ ಉದ್ಯಮ) ಉತ್ತೇಜನ ನೀಡಲು 10,000 ಕೋಟಿ ರೂ. ಘೋಷಿಸಲಾಗಿದೆ.


ಚಿಕ್ಕದಾದರೂ ಗಮನಾರ್ಹವಾದ ಉದ್ದಿಮೆಗಳಲ್ಲಿ ಜೇನು ಕೃಷಿಯೂ ಒಂದು. ಇದಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಉತ್ತೇಜನಗೊಳಿಸುವ ನಿಟ್ಟಿನಲ್ಲಿ ಸರ್ಕಾರ 500 ಕೋಟಿ ರೂ.ಗಳ ನೆರವನ್ನು ಘೋಷಿಸಿದೆ. ಜೇನು ಹಾಗೂ ಅದರ ಉಪ ಉತ್ಪನ್ನವಾದ ಮೇಣದ ತಯಾರಿಕೆಗಾಗಿ ಅಂತರ್ಗತ ಜೇನು ಸಾಕಾಣಿಕೆ ಅಭಿವೃದ್ಧಿ ಕೇಂದ್ರಗಳು, ಜೇನು ಸಂಗ್ರಹ ಕೇಂದ್ರಗಳು, ಮಾರುಕಟ್ಟೆ ಮತ್ತು ಸಂಸ್ಕರಣಾ ಕೇಂದ್ರಗಳು, ಜೇನು ಇಳುವರಿ ನಂತರದ ಚಟುವಟಿಕೆಗಳ ನಿರ್ವಹಣೆ ಹಾಗೂ ಜೇನಿನ ಗುಣಮಟ್ಟ ಹೆಚ್ಚಿಸುವ ಚಟುವಟಿಕೆಗಳನ್ನು ನಿರ್ವಹಿಸಲು ಇದನ್ನು ಬಳಸಲಾಗುತ್ತದೆ. ಅದಲ್ಲದೆ, ಜೇನು ಹುಳುಗಳ ಪತ್ತೆ ಹಚ್ಚುವಿಕೆ ಕ್ರಮಗಳ ಅಭಿವೃದ್ಧಿ, ಈ ಕ್ಷೇತ್ರದಲ್ಲಿ ದುಡಿಯುವ ಮಹಿಳೆಯರ ಕ್ಷಮತೆ ಹೆಚ್ಚಿಸಲು ಕ್ರಮ, ಜೇನು ತಳಿ ಅಭಿವೃದ್ಧಿಗಾಗಿಯೂ ಈ ನಿಧಿ ಬಳಸಲಾಗುತ್ತದೆ.

ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ              


ಕೃಷಿಕರು ಎದುರಿಸುತ್ತಿರುವ ದೊಡ್ಡ ಸಮಸ್ಯೆಯೆಂದರೆ, ಸಂಸ್ಕರಣಾ ಕೇಂದ್ರಗಳು, ಕೊಯ್ಲಿನ ನಂತರ ಬೆಳೆಗಳನ್ನು ಸರಿಯಾಗಿ ಸಂಗ್ರಹಿಸುವ ಮೂಲ ಸೌಕರ್ಯಗಳ ಕೊರತೆ. ಇದುವರೆಗೆ ಸಣ್ಣ ಬೆಳೆಸಾಲಗಳಿಗೆ ಆದ್ಯತೆ ನೀಡಲಾಗಿದೆಯೇ ಹೊರತು, ದೀರ್ಘಾವಧಿಯ ಮೂಲ ಸೌಕರ್ಯ ನಿರ್ಮಾಣ ಮಾಡುವ ಹೂಡಿಕೆಗೆ ಗಮನ ನೀಡಿಲ್ಲ.

 

ಇದನ್ನು ಗಮನದಲ್ಲಿಟ್ಟುಕೊಂಡು, ಮೂಲಸೌಕರ್ಯ ನಿರ್ಮಾಣ ಕ್ಕಾಗಿ 1 ಲಕ್ಷ ಕೋಟಿ ರೂ. ನೀಡಲು ಕೇಂದ್ರ ನಿರ್ಧರಿಸಿದೆ. ಕೃಷಿ ಸಹಕಾರ ಸಂಘಗಳು, ರೈತರ ಉತ್ಪಾದಕ ಸಂಸ್ಥೆಗಳು, ಕೃಷಿ ಉದ್ಯಮಿ ಗಳು, ಸ್ಟಾರ್ಟಪ್‌ಗಳು ಇತ್ಯಾದಿಗಳಲ್ಲಿ ಮೂಲಸೌಕರ್ಯ ನಿರ್ಮಾಣ ಕ್ಕೆ ಕೂಡಲೇ ಹಣ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಇಲ್ಲಿ ಸ್ಪರ್ಧಾತ್ಮಕ ವೆಚ್ಚದಲ್ಲಿ ಗುಣಮಟ್ಟ ಸಾಧಿಸುವುದು, ಕೃಷಿ ಕೇಂದ್ರಗಳ ಅಭಿವೃದ್ಧಿ ಪಡಿಸುವುದು ಇವೆಲ್ಲ ಕೇಂದ್ರದ ಉದ್ದೇಶಗಳು.

 

ದಿಗ್ಬಂಧನದ ಅವಧಿಯಲ್ಲಿ ಪ್ರೋತ್ಸಾಹ
ದೇಶದ ಆರ್ಥಿಕತೆಯನ್ನು ಮೇಲೆತ್ತಲು ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ ಘೋಷಿಸಿದೆ. ಆದರೆ ಕೊರೊನಾದಿಂದ ದಿಗ್ಬಂಧನಕ್ಕೊಳಗಾಗಿರುವ ಎರಡು ತಿಂಗಳ ಅವಧಿಯಲ್ಲೂ ಕೇಂದ್ರ ಹಲವು ರೀತಿಯಲ್ಲಿ ರೈತರಿಗೆ ನೆರವಾಗಿದೆ.

 

మరింత సమాచారం తెలుసుకోండి: