ಕೊರೋನಾ ವೈರಸ್ ಇಂದಾಗಿ ತಡವಾಗಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆಯು ಜೂನ್ 25ರಂದು ನಡೆಸಲು ಸರ್ಕಾರ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ. ಈ ಸಿದ್ದತೆಗಳನ್ನು ಸರ್ಕಾರ ಯಾವ ರೀತಿ ಮಾಡಿಕೊಂಡಿದೆ ಎಂಬುದನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಅಷ್ಟಕ್ಕೂ ಪರೀಕ್ಷೆಯನ್ನು ನಡೆಸಲು ತೆಗೆದುಕೊಂಡಿರುವ ಕ್ರಮಗಳೇನು ಗೊತ್ತಾ..?

 

ಮಕ್ಕಳ ಸುರಕ್ಷತೆ ಪ್ರಮುಖ ಆದ್ಯತೆ ನೀಡುವುದಾಗಿ ಹೈಕೋರ್ಟ್‍ಗೆ ಸರ್ಕಾರ ಭರವಸೆ ನೀಡಿದೆ. ನೀಡಿದ ಭರವಸೆಯಂತೆ ಜೂನ್ 25ರಿಂದ ಆರಂಭವಾಗುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಆಯೋಜಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸುವ ವಾತಾವರಣ ಇರಬೇಕು ಎಂದು ಶಿಕ್ಷಣ ಸಚಿವ ಎಸ್.ಸುರೇಶ ಕುಮಾರ್ ಹೇಳಿದರು.

 

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಗಳ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದರು.

 

ಒಂದು ಕೊಠಡಿಗೆ 18 ಮಕ್ಕಳುಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆ ಬೇಡ ಎಂದು ಕೆಲವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ನ್ಯಾಯಾಲಯ ಪರೀಕ್ಷೆ ನಡೆಸಲು ಅನುಮತಿ ನೀಡಿದೆ. ಕೋರ್ಟ್‌ ನೀಡಿದ ಸೂಚನೆ ಪಾಲಿಸಲಾಗುವುದು. ಪರೀಕ್ಷಾ ಕೊಠಡಿಯಲ್ಲಿ 18ಕ್ಕಿಂತ ಹೆಚ್ಚು ಮಕ್ಕಳು ಇರಬಾರದು. ದೊಡ್ಡ ಕೊಠಡಿ ಇದ್ದರೆ 20 ಮಕ್ಕಳಿಗಷ್ಟೇ ಅವಕಾಶ ನೀಡಬೇಕು. ಮಾರ್ಗಸೂಚಿ ಪ್ರಕಾರ ಅಂತರವನ್ನು ಕಾಯ್ದುಕೊಳ್ಳಬೇಕು. ಪ್ರತಿ ಮಕ್ಕಳು ಪ್ರವೇಶ ಪತ್ರ ಪಡೆಯುವಾಗಲೇ ಮಾಸ್ಕ್ ವಿತರಿಸಬೇಕು. ಪರೀಕ್ಷೆ ಮುಗಿದ ಬಳಿಕ ಮಕ್ಕಳು ಗುಂಪಾಗಿ ಸೇರದಂತೆ ಎಚ್ಚರಿಕೆ ವಹಿಸಬೇಕು. ಪ್ರತಿದಿನ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಲಾಗುವುದು. ಸಮಸ್ಯೆ ಕಂಡು ಬಂದರೆ ಮೊದಲೇ ನಿಗದಿಪಡಿಸಿದ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಎಲ್ಲಾ ಶಾಲೆಗಳಿಗೆ ಈಗಾಗಲೇ ಸ್ಯಾನಿಟೈಸರ್ ಒದಗಿಸಲಾಗಿದೆ ಎಂದು ವಿವರ ನೀಡಿದರು.

 

ಮಧ್ಯಾಹ್ನದ ಬಿಸಿಯೂಟ ಸ್ಥಳೀಯ ನಿರ್ಧಾರಪರೀಕ್ಷೆ ಆರಂಭವಾಗುವ ಎರಡು ದಿನಗಳ ಮೊದಲು ಪರೀಕ್ಷಾ ಕೇಂದ್ರಗಳ ಸ್ಯಾನಿಟೈಜೇಶನ್ ಮಾಡಬೇಕು. ಪರೀಕ್ಷೆ ಮುಗಿದ ಬಳಿಕ ಪ್ರತಿದಿನ ಪುನರಾವರ್ತಿಸಬೇಕು. ಪರೀಕ್ಷಾ ಕೊಠಡಿಯ ಮೇಲ್ವಿಚಾರಕರು ಎಲ್ಲಾ ಮುನ್ನೆಚ್ಚರಿಕೆ ವಹಿಸಬೇಕು. ಹೆಚ್ಚುವರಿಯಾಗಿ ಕೈಗವಸು ಧರಿಸಬೇಕು. ವಿದ್ಯಾರ್ಥಿಗಳು ಕಡ್ಡಾಯವಾಗಿ ಮನೆಯಿಂದಲೇ ಕುಡಿಯುವ ನೀರು ತೆಗೆದುಕೊಂಡು ಬರುವಂತೆ ಸೂಚನೆ ನೀಡಬೇಕು. ಮಧ್ಯಾಹ್ನ ಬಿಸಿಯೂಟ ಒದಗಿಸುವ ಕುರಿತು ಸ್ಥಳೀಯವಾಗಿಯೇ ನಿರ್ಧಾರ ಕೈಗೊಳ್ಳಬಹುದು. ಶಾಲಾ ಕೊಠಡಿಗಳಲ್ಲಿ ಊಟ ನೀಡಬಾರದು ಎಂದು ಸೂಚಿಸಿದರು.

ಮೂರು ಜಿಲ್ಲೆಗಳ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಪರೀಕ್ಷೆ ಸುಗಮವಾಗಿ ನಡೆಯಲು ತಮ್ಮ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕೈಗೊಂಡಿರುವ ಪೂರ್ವಸಿದ್ಧತೆಗಳ ಮಾಹಿತಿ ನೀಡಿದರು.

 

ಶಾಸಕ ಅರಗ ಜ್ಞಾನೇಂದ್ರ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಸಿಇಒ ಎಂ.ಎಲ್.ವೈಶಾಲಿ ಮತ್ತಿತರರು ಉಪಸ್ಥಿತರಿದ್ದರು.

 

మరింత సమాచారం తెలుసుకోండి: