ಕೊರೋನಾ ವೈರಸ್ ಇಂದಾಗಿ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ರಾಜ್ಯ ಸರ್ಕಾರ ಮುಂದಕ್ಕೆ ಹಾಕುತ್ತಲೇ ಇತ್ತು ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಾಗಿತ್ತು. ಆದರೆ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ಪರೀಕ್ಷೆಯನ್ನು ನಡೆಸಲು ತೀರ್ಮಾನಿಸಿದೆ. ಇದರಿಂದ ಕೆಲವು ವಿದ್ಯಾರ್ಥಿಗಳ ಮೊಕದಲ್ಲಿ ಮಂದಹಾಸ ಮೂಡಿದರೆ. ಪೋಷಕರ ಮುಖದಲ್ಲಿ ಆತಂಕದ ಛಾಯೆ ಆವರಿಸಿದೆ.

 

ಹೌದು ಕೊರೊನಾ ಸೋಂಕು ತೀವ್ರವಾಗಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ 7 ವಿಧಾನಸಭಾ ಕ್ಷೇತ್ರದಲ್ಲಿ ಲಾಕ್ಡೌನ್ ಹಾಗೂ ನಗರದ 5 ವಾರ್ಡ್ಗಳನ್ನು ಸೀಲ್ಡೌನ್ ಮಾಡಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಜೂ.25ರಂದು ನಡೆಸಲು ಉದ್ದೇಶಿಸಿರುವ ಎಸ್ಎಸ್ಎಲ್ಸಿ ಪರೀಕ್ಷೆ ಮೇಲೆ ಕಾರ್ಮೋಡ ಕವಿದಂತಾಗಿದೆ. ಜೂ.25ರಿಂದ ಜು.4ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ ಘೋಷಣೆಯಾಗಿದೆ.

 

ಪರೀಕ್ಷಾ ಮಂಡಳಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇತ್ತ ಮಹಾಮಾರಿ ಕೊರೊನಾ ಸೋಂಕು ಬೆಂಗಳೂರು ಮಹಾನಗರ ಸೇರಿದಂತೆ ರಾಜ್ಯದ ಎಲ್ಲೆಡೆ ತೀವ್ರಗೊಳ್ಳುತ್ತಿದೆ. ಸೊಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಹಲವು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

 

ಸೋಂಕು ಸಮುದಾಯಕ್ಕೆ ಹರಡದಂತೆ ತಡೆಯುವ ನಿಟ್ಟಿನಲ್ಲಿ ಬೆಂಗಳೂರಿನ ರಾಜಾಜಿನಗರ, ಬಸವನಗುಡಿ, ಮಲ್ಲೇಶ್ವರ, ಗಾಂಧಿನಗರ, ಚಿಕ್ಕಪೇಟೆ ಸೇರಿದಂತೆ 7 ವಿಧಾನಸಭಾ ಕ್ಷೇತ್ರದಲ್ಲಿ ಲಾಕ್ಡೌನ್ ಮಾಡಲು ಮುಂದಾಗಿರುವುದಲ್ಲದೆ, ಐದು ವಾರ್ಡ್ಗಳನ್ನು ಸೀಲ್ಡೌನ್ ಮಾಡಲು ಸರ್ಕಾರ ನಿರ್ಧರಿಸಿದೆ.

 

ಹೀಗಾಗಿ ಕ್ಷೇತ್ರ ಹಾಗೂ ವಾರ್ಡ್ ವ್ಯಾಪ್ತಿಯಲ್ಲಿರುವ ಪರೀಕ್ಷಾ ಕೇಂದ್ರಗಳಲ್ಲಿ ಯಾವ ರೀತಿ ಪರೀಕ್ಷೆಗಳನ್ನು ನಡೆಸುತ್ತಾರೆ ಎಂಬುದರ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ.ಪರೀಕ್ಷೆ ಪ್ರಾರಂಭವಾಗಲು ಕೇವಲ ಇನ್ನು ಮೂರು ದಿನ ಬಾಕಿ ಇದೆ. ರಾಜ್ಯಾದ್ಯಂತ 8 ಲಕ್ಷ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ.

 

ರಾಜಧಾನಿ ಬೆಂಗಳೂರಿನಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಸರ್ಕಾರ ಯಾವ ರೀತಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಿದೆ ಎಂಬುದು ಇನ್ನೂ ಅಯೋಮಯವಾಗಿದೆ.ಸೋಂಕು ನಿಯಂತ್ರಣ ಸಂಬಂಧ ಸರ್ಕಾರ ದಿನಕ್ಕೊಂದು ನಿರ್ಧಾರ ಕೈಗೊಳ್ಳುತ್ತಿದೆ. ಇದೇ ಜೂ.18ರಂದು ನಡೆದ ದ್ವಿತೀಯ ಪಿಯುಸಿಯ ಇಂಗ್ಲೀಷ್ ಪರೀಕ್ಷೆ ಸುಸೂತ್ರವಾಗಿ ನಡೆದರೂ ಹಲವು ಕಡೆ ಅವ್ಯವಸ್ಥೆಗಳು ಕಂಡು ಬಂದಿದ್ದವು.

 

ಅಲ್ಲಿ ಕೇವಲ ಒಂದು ವಿಷಯಕ್ಕೆ ಮಾತ್ರ ಪರೀಕ್ಷೆ ನಡೆಯಿತು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ 6 ವಿಷಯಗಳಿಗೆ ಪರೀಕ್ಷೆ ನಡೆಯಬೇಕಾಗಿದೆ. ಕೊರೊನಾ ಸೋಂಕು ಮತ್ತು ಸಾವಿನ ಗ್ರಾಫ್ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದು ಪೋಷಕರನ್ನು ಆತಂಕಕ್ಕೀಡು ಮಾಡಿದೆ. ಮಕ್ಕಳನ್ನು ಪರೀಕ್ಷೆಗೆ ಕಳುಹಿಸಬೇಕೇ, ಬೇಡವೇ ಎಂಬ ಜಿಜ್ಞಾಸೆಯಲ್ಲಿ ಪೋಷಕರಿದ್ದಾರೆ.

ಇತ್ತ ಸೋಂಕು ಸಮುದಾಯಕ್ಕೆ ಹರಡುವುದನ್ನು ತಪ್ಪಿಸಲು ಸರ್ಕಾರ ಕಟ್ಟುನಿಟ್ಟಿನ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ಎಲ್ಲವುಗಳ ನಡುವೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಮೇಲೆ ಆತಂಕದ ಛಾಯೆ ಆವರಿಸಿದೆ.

మరింత సమాచారం తెలుసుకోండి: