ತುಮಕೂರು: ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಇಂದು ತುಮಕೂರಿನ ಸರ್ಕಾರಿ ಶಾಲೆಯಲ್ಲೇ ಒಂದು ದಿನ ವಾಸ್ತವ್ಯ ಹೂಡಿ ಸ್ಥಿತಿಗತಿಗಳ ಬಗ್ಗೆ ಅರಿಯಲು ಮುಂದಾಗಿದ್ದಾರೆ. ಅದು ಯಾವ ಊರು ಗೊತ್ತಾ, ಮುಂದೆ ಓದಿ. ತುಮಕೂರು ಜಿಲ್ಲೆಯ ಗಡಿ ಪ್ರದೇಶವಾದ ಶನಿಮಹಾತ್ಮನ ಪವಾಡದ ಕ್ಷೇತ್ರ ಪಾವಗಡ ತಾಲೂಕಿನ ಎನ್.ಅಚ್ಚಮ್ಮನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ವಾಸ್ತವ್ಯ ಹೂಡಲಿದ್ದಾರೆ. ಸಂಜೆ 6 ಗಂಟೆಗೆ ಗ್ರಾಮದ ಶಾಲೆಗೆ ಆಗಮಿಸಲಿರುವ ಸಚಿವರು, ರಾತ್ರಿ ಇದೇ ಶಾಲೆಯಲ್ಲಿ ತಂಗಲಿದ್ದಾರೆ.


ಇದರ ಮದ್ಯೆ ಆರಂಭದಲ್ಲಿ ಗಡಿನಾಡ ಶಾಲೆಗಳ ಪ್ರಚಲಿತ ಸಮಸ್ಯೆಗಳು, ತಾಲೂಕು ಮತ್ತು ಜಿಲ್ಲೆಯ ಶೈಕ್ಷಣಿಕ ವಿಚಾರಗಳ ಕುರಿತ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಂಜೆ 6.30 ಗಂಟೆಗೆ ಸದರಿ ಶಾಲೆಯಲ್ಲಿ ವಿದ್ಯಾರ್ಥಿಗಳು, ಗ್ರಾಮಸ್ಥರು ಮತ್ತು ಪೋಷಕರೊಂದಿಗೆ ಸಂವಾದ ನಡೆಸಿ ರಾತ್ರಿ 10 ಗಂಟೆಗೆ ವಿದ್ಯಾರ್ಥಿಗಳು ನಡೆಸಿಕೊಡುವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡಲಿದ್ದಾರೆ.


ಬಳಿಕ ನಾಳೆ ಬೆಳಗ್ಗೆ 8 ಗಂಟೆಗೆ ಪಾವಗಡ ತಾಲೂಕು ಮತ್ತು ಜಿಲ್ಲೆಯ ಅಧಿಕಾರಿಗಳೊಂದಿಗೆ ಗಡಿನಾಡು ಶಾಲೆಗಳ ಶೈಕ್ಷಣಿಕ ಪ್ರಗತಿ ಬಗ್ಗೆ ಚರ್ಚಿಸಲಿದ್ದಾರೆ. ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಎಷ್ಟರಮಟ್ಟಿಗೆ ಆಗಿದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕ ವಲಯ ಸೇರಿದಂತೆ ಇಲ್ಲಿ ಏನಾಗುತ್ತಿದೆ ಎಂಬುದನ್ನು ಸಂಪೂರ್ಣವಾಗಿ ಅಧ್ಯಯನ ಮಾಡಲಿದ್ದಾರೆ. 


 ಬೆಳಿಗ್ಗೆ 9 ಗಂಟೆಗೆ ವೆಂಕಟಮ್ಮನಹಳ್ಳಿ, ಕ್ಯಾತಗಾನಚರ್ಲು, ವಳ್ಳೂರು ಹಾಗೂ ತಿರುಮಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿ ಮತ್ತು ಶಿಕ್ಷಕರೊಂದಿಗೆ ಸಂವಾದ ನಡೆಸಲಿದ್ದಾರೆ. ಶಾಲೆಯ ಸ್ಥಿತಿಗತಿಗಳನ್ನು ಪ್ರತ್ಯಕ್ಷ ಭೇಟಿ ನೀಡಿ, ವಾಸ್ತವ ನೋಡಲಿದ್ದಾರೆ. ನಾಳೆ ಮಧ್ಯಾಹ್ನದ ಬಳಿಕ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಈ ಹಿನ್ನೆಲೆಯಲ್ಲಿ ವಾಸ್ತವ್ಯ ಹೂಡಲಿರುವ ಶಾಲೆಯಲ್ಲಿ ಸರ್ವ ತಯಾರಿ ನಡೆದಿದೆ. ಕಳೆದೊಂದು ವಾರದಿಂದ ಶಾಲೆಯಲ್ಲಿ ಭರ್ಜರಿ ತಯಾರಿ ನಡೆದಿದೆ. 


మరింత సమాచారం తెలుసుకోండి: