ಬೆಂಗಳೂರು: ಕಳೆದ 7 ವರ್ಷಗಳಿಂದ  ಕಾವೇರಿ ನಿವಾಸದಲ್ಲೇ ವಾಸವಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇನ್ನು ಮುಂದೆಯೂ ಸಹ ಕಾವೇರಿ ನಿವಾಸದಲ್ಲೇ ವಾಸವಿರುವುದಾಗಿ, ಅವರಿಗೇ ಆ ನಿವಾಸ ಹಂಚಿಕೆ ಮಾಡಬೇಕಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿಗಳ ಅಧಿಕೃತ ನಿವಾಸ ರಾಜ್ಯದಲ್ಲಿ ಕಾವೇರಿ ನಿವಾಸ ವಾಗಿರುತ್ತದೆ. ಆದರೆ ಪ್ರಸ್ತುತ ಇದೀಗ ವಿರೋಧ ಪಕ್ಷದ ನಾಯಕ ವಾಸವಿರುವುದಾಗಿ ತಿಳಿಸಿದ್ದಾರೆ. 


ಇತ್ತೀಚೆಗೆ ಮುಖ್ಯಮಂತ್ರಿ ಬಿ. ಎಸ್​​ ಯಡಿಯೂರಪ್ಪ ನೂತನ ಸಚಿವರಿಗೆ ವಿಧಾನಸೌಧದ ಕೊಠಡಿಗಳ ಹಂಚಿಕೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಸರ್ಕಾರಿ ನಿವಾಸದ ಬಂಗಲೆ ಹಂಚಿಕೆ ಮಾಡಿ ಆದೇಶ ಹೊರಡಿಸಿದ್ದರು. ಈ ವೇಳೆ ಕಾವೇರಿ ನಿವಾಸ ಹೊರತುಪಡಿಸಿ, ಉಳಿದ ಸರ್ಕಾರಿ ಬಂಗಲೆಗಳನ್ನು ಹಂಚಿಕೆ ಮಾಡಿರುವುದು ಮಾತ್ರ ವಿಶೇಷವಾಗಿತ್ತು. ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ವಾಸ್ತವ್ಯ ಹೂಡಿರುವ ಕಾರಣದಿಂದಲೇ ಯಾವುದೇ ಸಚಿವರಿಗೆ ಹಂಚಿಕೆ ಮಾಡಿಲ್ಲ ಎನ್ನಲಾಗಿತ್ತು. 2013 ರಿಂದಲೂ ಸಿದ್ದರಾಮಯ್ಯ ಕುಮಾರಕೃಪ ರಸ್ತೆಯಲ್ಲಿರುವ ಇದೇ ಕಾವೇರಿ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದಾರೆ. ಮೈತ್ರಿ ಸರ್ಕಾರದಲ್ಲಿಯೂ ಯಾರಿಗೆ ಬಿಟ್ಟಕೊಡದೇ ಸಿದ್ದರಾಮಯ್ಯ ವಾಸ್ತವ್ಯ ಮುಂದುವರೆಸಿದ್ದರು. ಈ ಕಾವೇರಿ ನಿವಾಸದ ಮೇಲೆ ಮಾಜಿ ಸಿಎಂ ಡಾ. ಜಿ ಪರಮೇಶ್ವರ್​ ಕಣ್ಣಿಟ್ಟಿದ್ದರಾದರೂ, ಸಿದ್ದರಾಮಯ್ಯ ತೊರೆದಿರಲಿಲ್ಲ.


ಇದೀಗ ಮೈತ್ರಿ ಸರ್ಕಾರ ಪತನವಾದ ಬಳಿಕ ಬಿಜೆಪಿ ಸರ್ಕಾರ ಅಧಿಕ್ಕಾರಕ್ಕೆ ಬಂದಿದೆ. ಈಗಾಗಲೇ ಎಲ್ಲಾ ಸಚಿವರಿಗೆ ನಿವಾಸ ಹಂಚಿಕೆ ಮಾಡಲಾಗಿತ್ತಾದರೂ, ಕಾವೇರಿ ಮಾತ್ರ ಯಾರಿಗೂ ಹಂಚಿಕೆ ಮಾಡಿರಲಿಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೇ ಬಂದ ಮೇಲೂ ಸಿದ್ದರಾಮಯ್ಯ ತಮ್ಮ ನೆಚ್ಚಿನ ನಿವಾಸವನ್ನು ಬಿಡಲು ಮನಸು ಮಾಡಲಿಲ್ಲ ಎಂದು ಕೇಳಿಬರುತ್ತಿದೆ. ವಿಪಕ್ಷ ಸ್ಥಾನ ಕೈತಪ್ಪಿದರೇ ಕಾವೇರಿಯಿಂದ ಬೇರೆಡೆ ಹೋಗುವ ನಿರ್ಧಾರ ಮಾಡಿದ್ದರಂತೆ ಸಿದ್ದರಾಮಯ್ಯ. ಈ ನಡುವೆ ವಿಧಾನಸಭಾ ಅಧಿವೇಶನಕ್ಕೆ ಮುನ್ನವೇ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯರನ್ನು ವಿಪಕ್ಷ ನಾಯಕರನ್ನಾಗಿ ಆಯ್ಕೆ ಮಾಡಿದೆ. ಆದ್ದರಿಂದ ಸಿದ್ದರಾಮಯ್ಯ ಮುಖ್ಯಮಂತ್ರಿ ಯಡಿಯೂರಪ್ಪಗೆ ಪತ್ರ ಬರೆದು ಕಾವೇರಿ ನಿವಾಸವನ್ನು ತಮಗೆ ಹಂಚಿಕೆ ಮಾಡುವಂತೆ ಒತ್ತಾಯ ಮಾಡಿದ್ದಾರೆ.


మరింత సమాచారం తెలుసుకోండి: