ಬೆಂಗಳೂರು: ವಾದ ವಿವಾದಗಳ ನಡುವೆ ಕೊನೆಗೂ ಅಧಿವೇಶನದ ಮೂರು ದಿನಗಳು ಕಳೆದವು.  ಪ್ರಸಕ್ತ ಹಣಕಾಸು ವರ್ಷದಲ್ಲಿ 2.40 ಲಕ್ಷ ಕೋಟಿ ರೂ. ಮೊತ್ತದ ಆಯವ್ಯಯಕ್ಕೆ ಶನಿವಾರ ಉಭಯ ಸದನಗಳಲ್ಲಿ ಅನುಮೋದನೆ ಲಭಿಸಿದ ಬಳಿಕ ವಿಧಾನ ಮಂಡಲ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಎರಡನೇ ಕಂತಿನಲ್ಲಿ 7,927 ಕೋ.ರೂ. ಪೂರಕ ಅಂದಾಜು ಒಳಗೊಂಡಂತೆ 2019-2020ನೇ ಸಾಲಿನಲ್ಲಿ 2,40,74,585 ರೂ. ವೆಚ್ಚದ ಎರಡು ಧನ ವಿನಿಯೋಗ ಮಸೂದೆಗಳನ್ನು ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಉಭಯ ಸದನಗಳಲ್ಲಿ ಮಂಡಿಸಿ ಅನುಮೋದನೆ ಪಡೆದರು.


ರಾಜಸ್ವ ವೆಚ್ಚಕ್ಕೆ 1,84,649 ಕೋ. ರೂ. ಮತ್ತು ಬಂಡವಾಳ ವೆಚ್ಚಗಳಿಗೆ 56,096 ಕೋ. ರೂ. ವಿನಿಯೋಗಿಸುವುದಾಗಿ ಯಡಿಯೂರಪ್ಪ ಸದನಕ್ಕೆ ತಿಳಿಸಿದರು. ಇದರಲ್ಲಿ 9,964 ಕೋ. ರೂ. ಸಾರ್ವಜನಿಕ ಸಾಲವಿರುವುದಾಗಿಯೂ ಹೇಳಿದರು.
ಶನಿವಾರ ಬೆಳಗ್ಗೆ ಕಲಾಪ ಆರಂಭವಾದ ತತ್‌ಕ್ಷಣ 2018-19ನೇ ವರ್ಷಾಂತ್ಯಕ್ಕೆ 2,85,238 ಕೋ.ರೂ. ಸಾಲವಿದ್ದು, ಜಿಎಸ್‌ಡಿಪಿಯ ಶೇ.20.26 ರಷ್ಟಿದೆ. 2019-2020ರ ವರ್ಷಾಂತ್ಯಕ್ಕೆ ಒಟ್ಟು ಸಾಲ ಮೊತ್ತವು 3,27,209 ಕೋ. ರೂ.ಗಳಷ್ಟಾಗುವ ಅಂದಾಜು ಇದೆ. ಇದು ಸಹ ಶೇ.19.26ರಷ್ಟು ಎಂದು ಅಂದಾಜಿಸಲಾಗಿದೆ.


ಧನಿವಿನಿಯೋಗ ಮಸೂದೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ವಿಪಕ್ಷ ನಾಯಕ ಸಿದ್ದರಾಮಯ್ಯ, ಪ್ರಸಕ್ತ ಹಣಕಾಸು ವರ್ಷದ ಏಳು ತಿಂಗಳುಗಳು ಪೂರ್ಣಗೊಂಡಿದ್ದು, ಬಾಕಿ ಇರುವ ಐದು ತಿಂಗಳುಗಳಿಗೆ ಬಜೆಟ್‌ ಅನುಮೋದನೆ ಪಡೆಯಬೇಕಿದೆ. ಈಗಾಗಲೇ ಏಳು ತಿಂಗಳುಗಳಿಗೆ ಲೇಖಾನುದಾನ ಬಳಕೆಗೆ ಅನುಮೋದನೆ ಪಡೆಯಲಾಗಿದೆ. ಜೆಡಿಎಸ್‌ ಶಾಸಕಾಂಗ ನಾಯಕ ಎಚ್‌. ಡಿ. ಕುಮಾರಸ್ವಾಮಿ ಮಾತನಾಡಿ, ಭೀಕರ ನೆರೆಯಿಂದಾಗಿ ರಾಜ್ಯದಲ್ಲಿ ಕೆಟ್ಟ ಪರಿಸ್ಥಿತಿ ಇದ್ದು, ಸಂಪನ್ಮೂಲದ ಸದ್ಬಳಕೆಗೆ ಗಮನ ನೀಡಬೇಕು. 2017-18ನೇ ಸಾಲಿನಲ್ಲಿ 17,000 ಕೋ. ರೂ. ಖರ್ಚಾಗದೆ ಉಳಿದಿದೆ ಎಂದು ಮಹಾಲೇಖಪಾಲರ ವರದಿಯಲ್ಲಿದೆ.

ಪೂರಕ ಅಂದಾಜಿನಲ್ಲೂ 2,500 ಕೋ. ರೂ. ಖರ್ಚಾಗದೆ ಉಳಿದಿರುವ ಬಗ್ಗೆಯೂ ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.  ಕಳೆದ ಜು.29ರಂದೇ ಪೂರ್ಣ ಬಜೆಟ್‌ಗೆ ಅನುಮೋದನೆ ಪಡೆಯುವಂತೆ ಹೇಳಿದ್ದೆ. ಆದರೂ ಸರಕಾರ ಲೇಖಾನುದಾನ ಪಡೆಯಿತು. ಹಾಗಾಗಿ ಹೊಸ ಬಜೆಟ್‌ ಮಂಡಿಸುವ ನಿರೀಕ್ಷೆಯಿದೆ ಎಂದರು


మరింత సమాచారం తెలుసుకోండి: