ಮೈಸೂರು: ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ತೊಡೆತಟ್ಟಿ  ಸಿಡಿಲಬ್ಬರದಂತೆ ಗುಡುಗಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿ ಸಂಸದರಾಗಿರುವ ಶ್ರೀನಿವಾಸ್ ಪ್ರಸಾದ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ಕೂಡ ಬರೋಬ್ಬರಿ 6 ವರ್ಷಗಳ ನಂತರ. ಟಿ.ನರಸೀಪುರಲ್ಲಿ ನಡೆದ ಧಮ್ಮ ದೀಕ್ಷೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮತ್ತು ಶ್ರೀನಿವಾಸ್​ ಪ್ರಸಾದ್​ ಒಂದೇ ವೇದಿಕೆ ಹಂಚಿಕೊಂಡರು.

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕಂದಾಯ ಸಚಿವರಾಗಿದ್ದ ಶ್ರೀನಿವಾಸ್ ಪ್ರಸಾದ್ ಅವರನ್ನು ಸಚಿವ ಸಂಪುಟದಿಂದ ಕೈಬಿಡಲಾಗಿತ್ತು. ಇದರಿಂದ ಬೇಸರಗೊಂಡ  ಶ್ರೀನಿವಾಸ್ ಪ್ರಸಾದ್ ಅವರು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ ಸಿದ್ದರಾಮಯ್ಯ ಅವರ ವಿರುದ್ಧವೇ ತೊಡೆ ತಟ್ಟಿದ್ದರು. ತದ ನಂತರ ನಂಜನಗೂಡು ಉಪಚುನಾವಣೆಯಲ್ಲಿ ಶ್ರೀನಿವಾಸ್ ಪ್ರಸಾದ್ ಸೋತರು. ಇದಾದ ನಂತರ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಧ್ರುವ ನಾರಾಯಣ್​​ ವಿರುದ್ಧ ಗೆದ್ದು, ಚಾಮರಾಜನಗರ ಸಂಸದರಾಗಿ ಆಯ್ಕೆಯಾದರು. ಇದೀಗ 6 ವರ್ಷಗಳ ಬಳಿಕ ಸಿದ್ದರಾಮಯ್ಯ ಹಾಗೂ ಶ್ರೀನಿವಾಸ್​ ಪ್ರಸಾದ್​ ಒಂದೇ ವೇದಿಕೆ ಹಂಚಿಕೊಂಡಿದ್ದಾರೆ. 


ಸಿದ್ದರಾಮಯ್ಯ ಸಮ್ಮುಖದಲ್ಲೇ ಸಂಸದ ವಿ.ಶ್ರೀನಿವಾಸ ಪ್ರಸಾದ್ ಭಾಷಣ ಮಾಡಿದರು. ಅಂಬೇಡ್ಕರ್ ಯಾವುದೇ ಪಕ್ಷದ ರಾಜಕೀಯ ಮುಖಂಡರಲ್ಲ. ನಾನು ಒಂದು ಪಕ್ಷದಲ್ಲಿ ಇರಬಹುದು, ಮತ್ತೊಬ್ಬರು ಮತ್ತೊಂದು ಪಕ್ಷದಲ್ಲಿ ಇರಬಹುದು ಎಂದು ಸಿದ್ದರಾಮಯ್ಯನವರ ಹೆಸರು ಉಲ್ಲೇಖಿಸದೆ ಶ್ರೀನಿವಾಸ್​ ಪ್ರಸಾದ್​ ಮಾತನಾಡಿದರು. ಅಂಬೇಡ್ಕರ್ ಜಾತಿ, ಪಕ್ಷಗಳನ್ನು ಮೀರಿದ ನಾಯಕ. ದಲಿತರ ಪಾಲಿಗೆ ಅಂಬೇಡ್ಕರ್ ಆಧ್ಯಾತ್ಮಿಕ ನಾಯಕ. ನಮ್ಮಲ್ಲೇ ಜಾತಿ ಇಟ್ಟುಕೊಂಡು ಮತ್ತೊಬ್ಬರಿಗೆ ಜಾತಿ ಬಿಡಿ ಅಂತ ಹೇಳುವುದು ತಪ್ಪು. ನೊಂದ ಸಮುದಾಯಗಳೆಲ್ಲ ಒಂದಾಗಬೇಕು ಅಂತ ನಾನು ಹಲವಾರು ಬಾರಿ ಹೇಳಿದ್ದೇನೆ ಎಂದು ಕರೆ ನೀಡಿದರು.


ಮಾಜಿ ಸಿಎಂ ಸಿದ್ದರಾಮಯ್ಯ ವೇದಿಕೆಯಲ್ಲಿ ಭಾಷಣ ಮಾಡಿದರು.  ಅಂಬೇಡ್ಕರ್‌ರನ್ನು ಮರೆತರೆ ನಮ್ಮನ್ನು ನಾವೇ ಅನ್ಯಾಯ ಮಾಡಿಕೊಂಡಂತೆ. ನಮಗೆ ರಾಜಕೀಯಸ್ವಾತಂತ್ರ್ಯ ಕೇವಲ ಮತ  ಹಾಕುವಾಗ ಮಾತ್ರ ಇರುತ್ತದೆ. ನಾವೆಲ್ಲ ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ದೇಶದಲ್ಲಿ ಸಂವಿಧಾನ ಬದಲಾವಣೆ ಮಾಡಲು ಯಾರಾದರೂ ಹೋದರೆ ರಕ್ತಪಾತವಾಗುತ್ತದೆ. ಅಂಬೇಡ್ಕರ್ ಒಂದು ಜಾತಿ ಸಿಮೀತವಾಗಿಲ್ಲ. ಒಂದೇ ಜಾತಿಗೋಸ್ಕರ ಕೆಲಸ ಮಾಡಿಲ್ಲ ಎಂದರು.


మరింత సమాచారం తెలుసుకోండి: