ನವದೆಹಲಿ: ಮಾಜಿ ಸಚಿವ ಡಿ. ಕೆ ಶಿವಕುಮಾರ್ ಕಳೆದ ಇಪ್ಪತ್ತು ಸೆರೆಮನೆಯ ವಾಸ ಅನುಭವಿಸುತ್ತಿದ್ದರು  ಸಹ, ಆಸ್ತಿ ಗಳಿಕೆಯಲ್ಲಿ ವಿಶ್ವ ದಾಖಲೆ ಬರೆದಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಪರ ವಕೀಲರು ನಿನ್ನೆ ಕೋರ್ಟಿನಲ್ಲಿ ವಾದಿಸಿದ್ದಾರೆ. ಡಿಕೆ ಶಿವಕುಮಾರ್ ಅವರು 300ಕ್ಕೂ ಹೆಚ್ಚು ಕೋಟಿ ಆಸ್ತಿ ಹೊಂದಿದ್ದು, ಕ್ರಿಕೆಟ್‌ನಲ್ಲಿ ಹೇಗೆ ತ್ರಿಬಲ್ ಸೆಂಚುರಿ ಬಾರಿಸುತ್ತಾರೋ ಹಾಗೆ ಡಿಕೆ ಶಿವಕುಮಾರ್ ಅವರು ಆಸ್ತಿ ಗಳಿಕೆಯಲ್ಲಿ ತ್ರಿಬಲ್ ಸೆಂಚುರಿ ಬಾರಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಪರ ವಕೀಲ ಕೆ.ಎಂ ನಟರಾಜ್ ವಾದ ಮಂಡಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ವೇಳೆ ಎಎಸ್‌ಜಿ ನಟರಾಜ್ ಅವರು ನ್ಯಾ. ಸುರೇಶ್ ಕುಮಾರ್ ಕೈಟ್ ಅವರ ಏಕಸದಸ್ಯ ನ್ಯಾಯಪೀಠದ ಮುಂದೆ ಜಾಮೀನಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. 


ಶಾಸಕ ಡಿ.ಕೆ ಶಿವಕುಮಾರ್ ಅವರ ಪ್ರಕರಣದಲ್ಲಿ ಅವರ ಸೋದರ ಡಿಕೆ ಸುರೇಶ್ 27, ತಾಯಿ ಗೌರಮ್ಮ 38, ಡಿಕೆ ಶಿವಕುಮಾರ್ 24 ಆಸ್ತಿ ಹೊಂದಿದ್ದಾರೆ. ಆದರೆ ಡಿಕೆ ಶಿವಕುಮಾರ್ ಮತ್ತವರ ಕುಟುಂಬದ ಸದಸ್ಯರ ಬಳಿ 300ಕ್ಕೂ ಹೆಚ್ಚು ಕೃಷಿಯೇತರ ಆಸ್ತಿಗಳಿವೆ. ಬಹುತೇಕ ಆಸ್ತಿಗಳನ್ನು ನಗದು ನೀಡಿ ಖರೀದಿಸಲಾಗಿದೆ. ಅವರ 22 ವರ್ಷದ ಮಗಳು ಐಶ್ವರ್ಯ 108 ಕೋಟಿ ರೂ ವ್ಯವಹಾರ ಹೊಂದಿದ್ದು,ಇದರಲ್ಲಿ 40 ಕೋಟಿ ರೂ. ಸಾಲವನ್ನು ಅವರಿಗೆ ಯಾರು ಕೊಟ್ಟಿದ್ದಾರೆ ಎಂಬುದೇ ಗೊತ್ತಿಲ್ಲ. ಇದೇ ಮನಿ ಲಾಂಡರಿಂಗ್ , ಶಿವಕುಮಾರ್ ಅವರದ್ದು ಮನಿ ಲಾಂಡರಿಂಗ್‌ನ ಕ್ಲಾಸಿಕ್ ಪ್ರಕರಣ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.


ಡಿ.ಕೆ ಶಿವಕುಮಾರ್ ಮತ್ತವರ ಆಪ್ತರಿಗೆ ಸೇರಿದ ಜಾಗದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ 8.59 ಕೋಟಿ ರೂ ಹಣ ಸಿಕ್ಕಿತ್ತು. ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿತ್ತು. ಶಿವಕುಮಾರ್ ಈ ಹಣ ತಮ್ಮದೇ ಎಂದು ಹೇಳಿದ್ದಾರೆ. 1989ರಿಂದ ಆರೋಪಿಗೆ ಸಾಕ್ಷ್ಯಾಧಾರಗಳನ್ನು ತಿರುಚುವ ಅಭ್ಯಾಸವಿದೆ ಎಂದು ವಕೀಲರು ವಾದಿಸಿದ್ದಾರೆ. ಮುಂದೇನಾಗುತ್ತದೆ ಎಂಬುದು ಕಾದು ನೋಡಬೇಕಾಗುತ್ತದೆ. 


మరింత సమాచారం తెలుసుకోండి: