ವಿಜಯಪುರ: ಇಡೀ ರಾಜ್ಯವೇ ಪ್ರವಾಹಕ್ಕೆ ಸಿಲುಕಿ ಪರದಾಡುವ ಸ್ಥಿತಿ ನಿರ್ಮಾಣವಾದರೂ ಸಹ ಆ ಸಮಯಕ್ಕೆ ತಕ್ಕಂತೆ ಕೇಂದ್ರ ಸರ್ಕಾರದಿಂದ ನಯಾ ಪೈಸೆಯೂ ಸಿಗದಿದನ್ನು ಕಂಡು ಯತ್ನಾಳ್ ಕೇಂದ್ರದ ವಿರುದ್ದ ನೇರವಾಗಿ ಟೀಕಾ ಪ್ರಹಾರವೇ ನಡೆಸಿದ್ದರು. ಇದರಿಂದ ಕೇಂದ್ರವು ಪಕ್ಷದ ಅಶಿಸ್ತು ಹೇಳಿಕೆ ಇದಕ್ಕೆ ಉತ್ತರಿಸಿ ಎಂದು ಶೋಕಾಸ್ ನೋಟೀಸ್ ನೀಡಿತ್ತು. ಇದೀಗ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ನೀಡಿದ್ದ ಶೋಕಾಸ್ ನೋಟಿಸ್‌ಗೆ ಕೊನೆಗೂ ಉತ್ತರ ನೀಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ನಾಡಿನ ಮಠಾಧೀಶರು ಹಾಗೂ ಹಿತೈಷಿಗಳ ಸಲಹೆ ಮೇರೆಗೆ ನೋಟಿಸ್‌ಗೆ ಉತ್ತರ ನೀಡಿರುವುದಾಗಿ ತಿಳಿಸಿದರು.


ಯತ್ನಾಳ್ ಹೇಳಿಕೆ ಪಕ್ಷ ವಿರೋಧಿಯಾಗಿದೆ ಎಂದು ಬಿಜೆಪಿ ಕೇಂದ್ರ ಶಿಸ್ತು ಸಮಿತಿ ನೋಟಿಸ್ ಜಾರಿಗೊಳಿಸಿತ್ತು. ಹತ್ತು ದಿನಗಳ ಒಳಗಾಗಿ ಉತ್ತರ ನೀಡುವಂತೆ ಸೂಚಿಸಿತ್ತು. ಆದರೆ ನಾನು ಪಕ್ಷದ ವಿರುದ್ಧ ಮಾತನಾಡಿಲ್ಲ ಆ ಕಾರಣಕ್ಕಾಗಿ ಶೋಕಾಸ್ ನೋಟಿಸ್‌ಗೆ ಉತ್ತರ ನೀಡುವುದಿಲ್ಲ ಎಂದು ಯತ್ನಾಳ್ ಪಟ್ಟುಹಿಡಿದಿದ್ದರು.  ಇದೀಗ ಅವರು, ನಾನು ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಉತ್ತರ ಕರ್ನಾಟಕದ ಸಂತ್ರಸ್ತರ ಸಂಕಷ್ಟಕ್ಕೆ ಕೇಂದ್ರ ಸ್ಪಂದಿಸಲಿ ಎಂಬ ಕಳಕಳಿಗಾಗಿ ಧ್ವನಿ ಎತ್ತಿದ್ದೆ, ಹೊರತು ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ ಆದರೆ ಸಿಎಂ ಸೂಚನೆಯ ಹಿನ್ನೆಲೆಯಲ್ಲಿ ಅಕ್ಟೋಬರ್ 15ರಂದು ಶಿಸ್ತು ಸಮಿತಿ ನೀಡಿದ ನೋಟಿಸ್‌ಗೆ ಉತ್ತರಿಸಿದ್ದಾಗಿ ತಿಳಿಸಿದರು. 


ಪೇಜಾವರ ಶ್ರೀಗಳು, ಶ್ರೀಶೈಲ ಜಗದ್ಗುರುಗಳು, ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರುಗಳು, ಮೂರು ಸಾವಿರಮಠದ ಶ್ರೀಗಳು ನನಗೆ ಆಶೀರ್ವಾದ ಮಾಡಿ ನೀವು ಕರ್ನಾಟಕದ ಜನತೆಯ ಧ್ವನಿಯಾಗಿದ್ದೀರಿ, ನಾವು ನಿಮ್ಮ ಜೊತೆಗೆ ಇದ್ದೇವೆ ಎಂದು ಅಭಯ ನೀಡಿದ್ದಾರೆ ಎಂದು ಯತ್ನಾಳ ತಿಳಿಸಿದರು. ಮುಖ್ಯಮಂತ್ರಿ ಹಾಗೂ ಮಠಾಧೀಶರ ಸಲಹೆಯ ಮೇಲೆಗೆ ಪಕ್ಷ ನೀಡಿರುವ ನೋಟಿಸ್‌ಗೆ ಉತ್ತರಿಸಿದ್ದೇನೆ. ಮುಂದೆ ಏನಾಗಬೇಕೆಂಬುದು ಪಕ್ಷ ನಿರ್ಧಾರ ಮಾಡಲಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಬ್ಬರೂ ಸೇರಿ ಭವಿಷ್ಯದಲ್ಲಿ ನನಗೆ ಒಳ್ಳೆ ಆಶೀರ್ವಾದ ಮಾಡಲಿದ್ದಾರೆ ಎನ್ನುವ ಸಂಪೂರ್ಣ ವಿಶ್ವಾಸ ನನಗಿದೆ ಎಂದು ಆತ್ಮವಿಶ್ವಾಸದ ನುಡಿಗಳನ್ನಾಡಿದರು.


మరింత సమాచారం తెలుసుకోండి: