ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಿಂದ ರಾಜ್ಯ ರಾಜಕೀಯದಲ್ಲಿ  ಭಾರೀ ಬದಲಾವಣೆಗಳು ನಡೆಯುತ್ತಿವೆ. ಯಾರೂ ಊಹಿಸದ ದೊಡ್ಡ ಘಟನೆಗಳೇ ನಡೆಯುತ್ತಿವೆ. ಘಟಾನುಘಟಿ ನಾಯಕರೇ ಮನೆ ಸೇರಿದ್ದಾರೆ. ಆಪರೇಷನ್ ನಡೆಸಿ ಕೊನೆಗೂ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈ ಆಪರೇಷನ್ ನಲ್ಲಿ ಜೆಡಿಎಸ್ ಶಾಸಕರು ಸಹಕರಿಸಿ, ರಾಜೀನಾಮೆ ನೀಡಿದರು. ಕುಮಾರಸ್ವಾಮಿ ಸರ್ಕಾರದ ವಿರುದ್ಧ ಅಭಿವೃದ್ಧಿ ಹಿನ್ನಡೆ ಎಂದೆಲ್ಲಾ ಮಾತುಗಳು ಕೇಳಿ ಬಂದವು. ಸ್ವತಹ ಶಾಸಕರೇ ಮಾಧ್ಯಮಗಳ ಮುಂದೆ ಬಂದು ಈ ಸರ್ಕಾರದಿಂದ ಕ್ಷೇತ್ರಗಳ ಅಭಿವೃದ್ಧಿ ಆಗುತ್ತಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಎಲ್ಲದರಿಂದ ಇದೀಗ ಮತ್ತೇ ಜೆಡಿಎಸ್ ನಲ್ಲಿ ಮತ್ತೇ ಅಸಮಾಧಾನ ಭುಗಿಲೆದ್ದಿದೆ. 


ಉಪಚುನಾವಣೆಯ ಹೊತ್ತಲ್ಲೇ ಜೆಡಿಎಸ್ ನಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಜೆಡಿಎಸ್ ನ ಕೆಲವು ಶಾಸಕರು ನಾಳೆ ಬೆಂಗಳೂರಿನಲ್ಲಿ ಸಭೆ ಸೇರಿ ಮುಂದಿನ ನಡೆ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕಿರುವ ಜೆಡಿಎಸ್ ಶಾಸಕರು ಬೆಂಗಳೂರಿನಲ್ಲಿ ಸಭೆ ಸೇರಿ ತಮ್ಮ ಮುಂದಿನ ನಡೆಬಗ್ಗೆ ಚರ್ಚೆ ನಡೆಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಗುಬ್ಬಿ ಶ್ರೀನಿವಾಸ್, ಸುರೇಶ್ ಬಾಬು ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹೆಚ್.ಡಿ.ಕುಮಾರಸ್ವಾಮಿ ನಡೆ ಬಗ್ಗೆ ಹಲವು ಜೆಡಿಎಸ್ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದರು. ಮೈತ್ರಿ ಸರ್ಕಾರದ ಪತನದ ಬಳಿಕವೂ ಅಸಮಾಧಾನ ಮುಂದುವರೆದಿದ್ದು, ಜೆಡಿಎಸ್ ಅಸಮಾಧಾನಿತರು ನಾಳೆ ಸಭೆ ನಡೆಸಲು ನಿರ್ಧರಿಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.


ಸೋಮವಾರ ಕೆಲವರು ಚರ್ಚೆ ನಡೆಸಿದ್ದು, ಮಂಗಳವಾರ  ಬೆಂಗಳೂರಿನಲ್ಲಿ ಮತ್ತೊಂದು ಸುತ್ತಿನ ಭಿನ್ನಮತೀಯರ ಸಭೆ ನಡೆಸಲಾಗುವುದು. ಜೆಡಿಎಸ್ ನಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಭುಗಿಲೆದ್ದಿದ್ದು, ವಿಧಾನಪರಿಷತ್ ಸದಸ್ಯರು, ಶಾಸಕರು ಕುಮಾರಸ್ವಾಮಿ ನಡೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹೆಚ್.ಡಿ.ಕೆ. ನಡೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಪಕ್ಷ ಬಿಡುವ ಬಗ್ಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.


మరింత సమాచారం తెలుసుకోండి: