ಪೋಖರಾ (ನೇಪಾಳ): ಒಂದು ಪಂದ್ಯದಲ್ಲಿ ಎರಡು, ಮೂರು ವಿಕೆಟ್ ಪಡೆಯುವುದೇ ದೊಡ್ಡ ಸಾಹಸ ವಾಗಿರುತ್ತದೆ. ಆದರೆ ಈ ಬೌಲರ್ ಒಂದೇ ಪಂದ್ಯದಲ್ಲಿ ಕೇವಲ ಒಂದೇ ಒಂದು ಕೂಡ ನೀಡದೆ 6 ವಿಕೆಟ್ ಗಳನ್ನು ಉರುಳಿಸುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ. ಹೌದು, ಈಗೂ ಉಂಟ ಎಂದು ಆಶ್ಚರ್ಯವಾಗುವಂತೆ ಮಾಡಿದ್ದಾರೆ. 
 
ವಿಶ್ವ ಮಟ್ಟದಲ್ಲಿ ನೇಪಾಲ ಇನ್ನೂ “ಕ್ರಿಕೆಟ್‌ ಶಿಶು’. ಆದರೆ ಇಲ್ಲಿನ ವನಿತಾ ತಂಡದ ಬೌಲರ್‌ ಒಬ್ಬರು ಟಿ20 ಕ್ರಿಕೆಟ್‌ನಲ್ಲಿ ವಿಶಿಷ್ಟ ಸಾಧನೆಯ ಮೂಲಕ ಸುದ್ದಿಯಾಗಿದ್ದಾರೆ. ಪೋಖರಾದಲ್ಲಿ ನಡೆದ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಒಂದೂ ರನ್‌ ನೀಡದೆ 6 ವಿಕೆಟ್‌ ಹಾರಿಸಿದ್ದಾರೆ! ಈ ಬೌಲರ್‌ ಹೆಸರು ಅಂಜಲಿ ಚಂದ್‌. “ಸೌತ್‌ ಏಶ್ಯನ್‌ ಗೇಮ್ಸ್‌ ಕ್ರಿಕೆಟ್‌ ಚಾಂಪಿಯನ್‌ಶಿಪ್‌’ ಸರಣಿಯ ನೇಪಾಲ ವಿರುದ್ಧದ ಪಂದ್ಯದಲ್ಲಿ ಮಾಲ್ಡೀವ್ಸ್‌ 11 ಓವರ್‌ಗಳೊಳಗೆ 16 ರನ್ನಿಗೆ ಆಲೌಟ್‌ ಆಯಿತು. ಆತಿಥೇಯ ನೇಪಾಲ ಇದನ್ನು ಕೇವಲ 5 ಎಸೆತಗಳಲ್ಲಿ ಬೆನ್ನಟ್ಟಿ ದಾಖಲೆಯ ಗೆಲುವು ಸಾಧಿಸಿದೆ. 
 
ಮಾಲ್ಡೀವ್ಸ್‌ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದ ಅಂಜಲಿ ಚಂದ್‌ 7ನೇ ಓವರಿನಲ್ಲಿ 3 ವಿಕೆಟ್‌ ಹಾಗೂ 9ನೇ ಓವರಿನಲ್ಲಿ 2 ವಿಕೆಟ್‌ ಕಿತ್ತರು. ಒಟ್ಟು 2.1 ಓವರ್‌ ಎಸೆದ ಅಂಜಲಿ ಒಂದೂ ರನ್‌ ನೀಡದೆ 6 ವಿಕೆಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡರು. ಇದು ವನಿತಾ ಟಿ20 ಕ್ರಿಕೆಟ್‌ನ ನೂತನ ದಾಖಲೆಯಾಗಿದೆ. ಇದೇ ವರ್ಷ ಮಾಲ್ಡೀವ್ಸ್‌ನ ಮಾಸ್‌ ಎಲಿಸಾ ಚೀನ ವಿರುದ್ಧ 3 ರನ್ನಿಗೆ 6 ವಿಕೆಟ್‌ ಉರುಳಿಸಿದ ದಾಖಲೆ ಪತನಗೊಂಡಿತು. ಪುರುಷರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನೊಂದಿಗೆ ಸಮೀಕರಿಸಿದಾಗಲೂ ಅಂಜಲಿ ಸಾಧನೆ ವಿಶ್ವದಾಖಲೆ ಎನಿಸಿಕೊಳ್ಳುತ್ತದೆ. ನ. 10ರಂದು ನಾಗ್ಪುರದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತದ ದೀಪಕ್‌ ಚಹರ್‌ 3.2 ಓವರ್‌ಗಳಲ್ಲಿ 7ರನ್ನಿತ್ತು 6ವಿಕೆಟ್‌ ಹಾರಿಸಿದ್ದು, ಇದು ಪುರುಷರ ಟಿ20 ಪಂದ್ಯದ ದಾಖಲೆಯಾಗಿದೆ. ಇದಕ್ಕೂ ಮೊದಲು ಶ್ರೀಲಂಕಾದ ಅಜಂತ ಮೆಂಡಿಸ್‌ 8ರನ್ನಿಗೆ 6ವಿಕೆಟ್‌ ಉರುಳಿಸಿದ್ದರು. ಇದೀಗ ರನ್ ನೀಡದೆ 6ವಿಕೆಟ್ ಪಡೆದಿರುವುದು ದಾಖಲೆಯಾಗಿದೆ.

మరింత సమాచారం తెలుసుకోండి: