ಆಕ್ಲೆಂಡ್: ಪ್ರವಾಸಿ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ದ್ವಿತೀಯ ಟ್ವೆಂಟಿ-20 ಪಂದ್ಯವು ಆಕ್ಲೆಂಡ್ ಮೈದಾನದಲ್ಲಿ ಇಂದು ನಡೆಯಲಿದೆ. 5 ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿರುವ ಟೀಮ್ ಇಂಡಿಯಾ ಇಂದಿನ ಎರಡನೇ ಟಿ20 ಪಂದ್ಯದಲ್ಲಿ ಗೆದ್ದು ಭಾರತೀಯರಿಗೆ ಗಣರಾಜ್ಯೋತ್ಸವಕ್ಕೆ ಗೆಲುವಿನ ಉಡುಗೊರೆ ನೀಡಲಿದೆಯೇ! 
 
ಮೊದಲ ಟಿ20 ಪಂದ್ಯದಂತೆ ದ್ವಿತೀಯ ಪಂದ್ಯದಲ್ಲೂ ರನ್ ಪ್ರವಾಹವನ್ನು ನಿರೀಕ್ಷಿಸಬಹುದಾಗಿದೆ. ಹಾಗಾಗಿ ಟಾಸ್ ಗೆದ್ದರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ  ಮೊದಲು ಫೀಲ್ಡಿಂಗ್ ಆಯ್ದುಕೊಳ್ಳುವುದು ಸುನಶ್ಚಿತವೆನಿಸಿದೆ. ಇನ್ನು ಮೊದಲು ಬ್ಯಾಟಿಂಗ್ ನಡೆಸಿದರೆ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ದೊಡ್ಡ ಮೊತ್ತ ಕಲೆ ಹಾಕುವುದು ಅನಿವಾರ್ಯವೆನಿಸಿದೆ. ಮೊದಲ ಪಂದ್ಯ ವಿಜೇತ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಕಂಡುಬರುವ ಸಾಧ್ಯತೆ ಕಡಿಮೆಯಾಗಿದೆ. ಅಂದರೆ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಕೆಎಲ್ ರಾಹುಲ್ ನಿರ್ವಹಿಸಲಿದ್ದಾರೆ.
 
ಇದರಿಂದ ಉದಯೋನ್ಮುಖ ರಿಷಬ್ ಪಂತ್ ಅವಕಾಶ ವಂಚಿತವಾಗಲಿದ್ದಾರೆ. ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್‌ನಲ್ಲಿ ರಾಹುಲ್ ಪರಿಪೂರ್ಣ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಮೊದಲ ಪಂದ್ಯದಲ್ಲಿ ನಿರಾಸೆ ಅನುಭವಿಸಿರುವ ರೋಹಿತ್ ಶರ್ಮಾ ಲಯಕ್ಕೆ ಮರಳುವ ಇರಾದೆಯಲ್ಲಿದ್ದಾರೆ. ಇವರ ಜೊತೆಗೆ ಕೆಎಲ್ ರಾಹುಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ತಂಡದ ಆಧಾರ ಸ್ತಂಭವಾಗಲಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಫಿನಿಶರ್ ಜವಾಬ್ದಾರಿಯನ್ನು ವಹಿಸಲಿದ್ದಾರೆ. ಇವರಿಗೆ ಕೆಳ ಕ್ರಮಾಂಕದಲ್ಲಿ ಮನೀಶ್ ಪಾಂಡೆ ಬಲ ತುಂಬಲಿದ್ದಾರೆ. ಆಲ್‌ ರೌಂಡರ್ ಸ್ಥಾನದಲ್ಲಿ ರವೀಂದ್ರ ಜಡೇಜಾ ಹಾಗೂ ಶಿವಂ ದುಬೆ ಮುಂದುವರಿಯುವ ಸಾಧ್ಯತೆಯಿದೆ. ಇನ್ನು ರಿಸ್ಟ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಪರಿಣಾಮಕಾರಿ ಎನಿಸಿದ್ದಾರೆ. ವೇಗದ ಪಡೆಯನ್ನು ಜಸ್ಪ್ರೀತ್ ಬುಮ್ರಾ ಮುನ್ನಡೆಸಲಿದ್ದು, ಮೊಹಮ್ಮದ್ ಶಮಿ ಸಾಥ್ ನೀಡಲಿದ್ದಾರೆ. ಈ ಮಧ್ಯೆ ಶಾರ್ದೂಲ್ ಠಾಕೂರ್ ಸ್ಥಾನಕ್ಕೆ ನವದೀಪ್ ಸೈನಿ ಆಯ್ಕೆಯಾಗಬಹುದು. 
 
ಅತ್ತ ಕಿವೀಸ್ ತಂಡವು ಬ್ಯಾಟಿಂಗ್‌ನಲ್ಲಿ 200ಕ್ಕೂ ಹೆಚ್ಚು ರನ್ ಕಲೆ ಹಾಕಿದರೂ ಬೌಲಿಂಗ್ ವಿಭಾಗವು ಕೈಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಬೌಲಿಂಗ್ ವಿಭಾಗವನ್ನು ಮತ್ತಷ್ಟು ಬಲಪಡಿಸಲು ಗುರಿಯಾಗಿಸಲಿದೆ. ಒಟ್ಟಿನಲ್ಲಿ ಆಕ್ಲೆಂಡ್‌ನಲ್ಲಿ ಮಗದೊಂದು ಕುತೂಹಲಕಾರಿ ಪಂದ್ಯವಿಂದು ನಡೆಯಲಿದ್ದು, ಗೆಲುವು ಯಾರದಾಗುತ್ತೆ ಎಂದು ಕಾದುನೋಡಬೇಕಾಗಿದೆ.

మరింత సమాచారం తెలుసుకోండి: