ವೆಲ್ಲಿಂಗ್ಟನ್: ಟೀಂ ಇಂಡಿಯಾ ವರ್ಸಸ್ ಕಿವೀಸ್ ಟಿ20 ಸರಣಿಯ 4ನೇ ಪಂದ್ಯವು ಮತ್ತೊಮ್ಮೆ ಸೂಪರ್ ಓವರ್‌ ನಡೆದು ಟೀಂ ಇಂಡಿಯಾ ಗೆಲುವಿನ ನಗೆ ಬೀರಿದೆ. ನಾಲ್ಕನೇ ಟಿ20 ಪಂದ್ಯವೂ ಟೈನಲ್ಲಿ ಅಂತ್ಯವಾಗಿದ್ದರಿಂದ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯಿತು. 14 ರನ್‌ಗಳ ಗುರಿಯನ್ನು ಟೀಂ ಇಂಡಿಯಾ ಇನ್ನೊಂದು ಎಸೆತ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದೆ. 
 
4ನೇ ಟಿ20 ಪಂದ್ಯವೂ ಟೈನಲ್ಲಿ ಅಂತ್ಯವಾಗಿದ್ದರಿಂದ, ಫಲಿತಾಂಶಕ್ಕೆ ಸೂಪರ್ ಓವರ್ ಮೊರೆ ಹೋಗಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 13 ರನ್ ಬಾರಿಸುವ ಮೂಲಕ ಭಾರತಕ್ಕೆ ಗೆಲ್ಲಲು 14 ರನ್‌ಗಳ ಗುರಿ ನೀಡಿತು. ಇದಕ್ಕುತ್ತರವಾಗಿ ಭಾರತ ಪರ ಕೆ.ಎಲ್ ರಾಹುಲ್-ವಿರಾಟ್ ಕೊಹ್ಲಿ ಬ್ಯಾಟ್ ಬೀಸಿದರು. ಕೀವೀಸ್ ಪರ ಬೌಲಿಂಗ್ ಜವಾಬ್ದಾರಿಯನ್ನು ಟಿಮ್ ಸೌಥಿ ವಹಿಸಿಕೊಂಡರು. ಮೊದಲ ಎಸೆತದಲ್ಲೇ ರಾಹುಲ್ ಚೆಂಡನ್ನು ಸಿಕ್ಸರ್‌ಗಟ್ಟಿದರು. ಇನ್ನು ಎರಡನೇ ಎಸೆತದಲ್ಲಿ ಚೆಂಡನ್ನು ಬೌಂಡರಿಗಟ್ಟಿದ ರಾಹುಲ್ ಮೂರನೇ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ನಾಲ್ಕನೇ ಎಸೆತದಲ್ಲಿ 2 ರನ್ ಗಳಿಸಿದ ಕೊಹ್ಲಿ, 5ನೇ ಎಸೆತದಲ್ಲಿ ಚೆಂಡನ್ನು ಬೌಂಡರಿಗಟ್ಟುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. 
 
ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ ಕನ್ನಡಿಗ ಮನೀಶ್ ಪಾಂಡೆ ಆಕರ್ಷಕ ಅರ್ಧಶತಕ ಹಾಗೂ ಕೆ.ಎಲ್ ರಾಹುಲ್ 39 ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 8 ವಿಕೆಟ್ ಕಳೆದುಕೊಂಡು 165 ರನ್ ಬಾರಿಸಿತ್ತು. ಈ ಮೂಲಕ ಕಿವೀಸ್‌ಗೆ ಗೆಲ್ಲಲು 166 ರನ್‌ಗಳ ಗುರಿ ನೀಡಿತ್ತು.
 
ಗುರಿ ಬೆನ್ನತ್ತಿದ ಕಿವೀಸ್, ಆರಂಭಿಕ ಬ್ಯಾಟ್ಸ್‌ಮನ್ ಕಾಲಿನ್ ಮನ್ರೋ(64) ಹಾಗೂ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ಟಿಮ್ ಸೈಫರ್ಟ್(57) ಆಕರ್ಷಕ ಅರ್ಧಶತಕದ ಹೊರತಾಗಿಯೂ 165 ರನ್‌ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಟೀಂ ಇಂಡಿಯಾ 4-0 ಅಂತರದಿಂದ ಸರಣಿ ವೈಟ್ ವಾಟ್ ಕಡೆಗೆ ಮುನ್ನುಗ್ಗಿತು. ಇನ್ನು ಭಾರತ-ನ್ಯೂಜಿಲೆಂಡ್ ನಡುವಿನ ಕೊನೆಯ ಹಾಗೂ 5ನೇ ಟಿ20 ಪಂದ್ಯವು ಫೆಬ್ರವರಿ 02ರಂದು ಬೇ ಓವಲ್‌ನಲ್ಲಿ ನಡೆಯಲಿದೆ.

మరింత సమాచారం తెలుసుకోండి: