ನವದೆಹಲಿ: ಭಾರತ ಏಕದಿನದದ ಉಪನಾಯಕ ಹಿಟ್ ಮ್ಯಾನ್  ರೋಹಿತ್ ಶರ್ಮ ನ್ಯೂಜಿಲೆಂಡ್ ಪ್ರವಾಸದ ಏಕದಿನ ಹಾಗೂ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ಏಕದಿನ ತಂಡಕ್ಕೆ ಕನ್ನಡಿಗ ಮಯಾಂಕ್ ಅಗರ್ವಾಲ್ ಮತ್ತು ಟೆಸ್ಟ್ ತಂಡಕ್ಕೆ ಯುವ ಬ್ಯಾಟ್ಸ್​ಮನ್ ಶುಭಮಾನ್ ಗಿಲ್ ಅವರನ್ನು ಆರಿಸಲಾಗಿದೆ. ರೋಹಿತ್ ಶರ್ಮಾ ಔಟ್ ಆಗಿದ್ದು ಯಾಕೆ ಗೊತ್ತಾ! 
 
ಭಾನುವಾರ ನ್ಯೂಜಿಲೆಂಡ್ ಎದುರು ನಡೆದ 5ನೇ ಹಾಗೂ ಅಂತಿಮ ಟಿ20 ಪಂದ್ಯದ ವೇಳೆ ರೋಹಿತ್ ಶರ್ಮ ಕಾಲಿನ ನೋವಿಗೆ ತುತ್ತಾಗಿದ್ದರು. 41 ಎಸೆತಗಳಲ್ಲಿ 60 ರನ್ ಸಿಡಿಸಿದ್ದ ರೋಹಿತ್ ಕಣದಿಂದ ಹಿಂದೆ ಸರಿದಿದ್ದರು. ‘ರೋಹಿತ್ ಶರ್ಮ ಫಿಟ್ನೆಸ್​ ಅನ್ನು ಫಿಸಿಯೋ ಪರಿಶೀಲಿಸುತ್ತಿದ್ದು, ಅವರ ಗಾಯದ ಗಂಭೀರತೆ ಇನ್ನಷ್ಟೇ ಸ್ಪಷ್ಟವಾಗಬೇಕಾಗಿದೆ. ಆದರೆ, ಅವರು ಪ್ರವಾಸದ ಮುಂದಿನ ಭಾಗದಲ್ಲಿ ತಂಡದ ಜತೆಗಿರುವುದಿಲ್ಲ ಎಂಬುದು ಖಚಿತ’ ಎಂದು ಬಿಸಿಸಿಐ ತಿಳಿಸಿದೆ. ಟಿ20 ಸರಣಿ ಕ್ಲೀನ್​ ಸ್ವೀಪ್ ಸಾಧಿಸಿ ಪ್ರವಾಸದಲ್ಲಿ ಶುಭಾರಂಭ ಕಂಡಿದ್ದ ಭಾರತ ತಂಡಕ್ಕೆ ರೋಹಿತ್ ಗೈರು ಉಳಿದೆರಡು ಸರಣಿಗಳಲ್ಲಿ ಹೊಡೆತ ನೀಡಲಿದೆ. ಭಾರತ ತಂಡ ಬುಧವಾರದಿಂದ 3 ಏಕದಿನ ಪಂದ್ಯಗಳ ಸರಣಿ ಆಡಲಿದೆ. ಬಳಿಕ ಫೆ. 21ರಿಂದ 1 ಟೆಸ್ಟ್ ಮತ್ತು 29ರಿಂದ 2ನೇ ಟೆಸ್ಟ್ ಪಂದ್ಯ ಆಡಲಿದೆ.
 
ಈಗಾಗಲೆ ಭಾರತ ಎ ತಂಡದೊಂದಿಗೆ ನ್ಯೂಜಿಲೆಂಡ್ ಪ್ರವಾಸ ದಲ್ಲಿರುವ ಮಯಾಂಕ್ ಅಗರ್ವಾಲ್, ಏಕದಿನ ತಂಡದಲ್ಲಿ ರೋಹಿತ್ ಜಾಗ ತುಂಬಲಿದ್ದಾರೆ. ಈಗಾಗಲೆ ಕೆ ಎಲ್ ರಾಹುಲ್ ಮತ್ತು ಗಾಯಾಳು ಶಿಖರ್ ಧವನ್ ಬದಲು ತಂಡ ಕೂಡಿಕೊಂಡಿರುವ ಪೃಥ್ವಿ ಷಾ ತಂಡದಲ್ಲಿರುವ ಆರಂಭಿಕರಾಗಿದ್ದಾರೆ. ಇನ್ನಷ್ಟೇ ಏಕದಿನ ಕ್ರಿಕೆಟ್ ​ಗೆ ಪದಾರ್ಪಣೆ ಮಾಡಬೇಕಿರುವ ಮಯಾಂಕ್, ಮೀಸಲು ಆರಂಭಿಕರಾಗಿರಲಿದ್ದಾರೆ. ಈ ಮುನ್ನ ಏಕದಿನ ವಿಶ್ವಕಪ್ ಮತ್ತು ತವರು ನೆಲದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಮಯಾಂಕ್ ಭಾರತ ತಂಡದಲ್ಲಿದ್ದರೂ ಆಡುವ ಅವಕಾಶ ಪಡೆದಿರಲಿಲ್ಲ. ಇದೀಗ ರಾಹುಲ್ ಗೆ ಮತ್ತೇ ಅವಕಾಶ ಸಿಕ್ಕಿದ್ದು ಅಬ್ಬರಿಸುವ ಮುನ್ಸೂಚನೆ ನೀಡಿದ್ದಾರೆ.
 

మరింత సమాచారం తెలుసుకోండి: