ಆಕ್ಲೆಂಡ್‌: ಭಾರತ ತಂಡಕ್ಕೆ ದೀರ್ಘ ಕಾಲದಿಂದ ಕಾಡುತ್ತಿದ್ದ 4ನೇ ಕ್ರಮಾಂಕದ ಬ್ಯಾಟ್ಸ್‌ ಮನ್‌ ಕೊರತೆಯನ್ನು ಯುವ ಪ್ರತಿಭೆ ಶ್ರೇಯಸ್‌ ಅಯ್ಯರ್‌ ನೀಗಿಸುತ್ತಿದ್ದಾರೆ. ಹೌದು, ನಾಲ್ಕನೇ ಕ್ರಮಾಂಕದಲ್ಲಿ ತಂಡದ ಅಗತ್ಯಕ್ಕೆ ತಕ್ಕಂತೆ ಬ್ಯಾಟಿಂಗ್‌ ಮಾಡಬಲ್ಲೆ ಎಂಬುದನ್ನು ಇತ್ತೀಚಿನ ಸರಣಿಗಳಲ್ಲಿ ಅಯ್ಯರ್‌ ಪದೇ ಪದೇ ಸಾಬೀತು ಪಡಿಸುತ್ತಾ ಇದೀಗ ದಿ ಬೆಸ್ಟ್ ಆಗಿದ್ದಾರೆ. ಹೌದು, ಅದು ಹೇಗೆ ಗೊತ್ತಾ!? 
 
ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನದ ಪಂದ್ಯದಲ್ಲಿ 35 ಎಸೆತಗಳಲ್ಲಿ 44 ರನ್‌ ಚಚ್ಚಿದ್ದ ಶ್ರೇಯಸ್‌, ಬಳಿಕ ಕಿವೀಸ್‌ ವಿರುದ್ಧದ ಮೊದಲ ಟಿ20ಯಲ್ಲೂ 29 ಎಸೆತಗಳಲ್ಲಿ ಅಜೇಯ 58 ರನ್‌ ಸಿಡಿಸಿ ಪಂದ್ಯಶ್ರೇಷ್ಠ ಗೌರವ ಪಡೆದಿದ್ದರು. ಇದೀಗ ನ್ಯೂಜಿಲೆಂಡ್‌ ವಿರುದ್ಧದ ಒಡಿಐ ಸರಣಿಯ ಮೊದಲ ಪಂದ್ಯದಲ್ಲಿ ಚೊಚ್ಚಲ ಶತಕ ಬಾರಿಸಿ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಭಾರತ ತಂಡದ ಪರ ನಾಲ್ಕನೇ ಕ್ರಮಾಂಕದಲ್ಲಿ ಯಶಸ್ಸು ಕಂಡವರ ಪೈಕಿ ಧೋನಿ ಒಳಗೊಂಡಂತೆ ಘಟಾನುಘಟಿಗಳಿಗೆ ಸಡ್ಡು ಹೊಡೆದಿದ್ದಾರೆ. ಆ ಅಂಕಿ ಅಂಶಗಳ ವಿವರ ಇಲ್ಲಿದೆ ನೋಡಿ. 
 
ಅಂಕಿ ಅಂಶಗಳ ಪ್ರಕಾರ 2017ರ ಬಳಿಕ ಭಾರತ ತಂಡದ ಪರ 4ನೇ ಕ್ರಮಾಂಕದಲ್ಲಿ ಆಡಿರುವ ಬ್ಯಾಟ್ಸ್‌ ಮನ್‌ ಗಳ ಪೈಕಿ ಶ್ರೇಯಸ್‌ ಅಯ್ಯರ್‌ ಅವರ ಬ್ಯಾಟಿಂಗ್‌ ಸರಾಸರಿ ಅದ್ಭುತವಾಗಿದೆ. 25 ವರ್ಷದ ಅಯ್ಯರ್‌ ಈ ಕ್ರಮಾಂಕದಲ್ಲಿ 6 ಬಾರಿ ಆಡಿದ್ದು, 56.80ರ ಸರಾಸರಿಯಲ್ಲಿ ಒಟ್ಟು 284 ರನ್‌ ಬಾರಿಸಿದ್ದಾರೆ. ಅದೇ ಅನುಭವಿಗಳಾದ ದಿನೇಶ್‌ ಕಾರ್ತಿಕ್‌ (52.80), ಎಂಎಸ್‌ ಧೋನಿ (45.00), ಅಂಬಾಟಿ ರಾಯುಡು (42.18) ಮತ್ತು ಅಜಿಂಕ್ಯ ರಹಾನೆ (35.00) ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿ ಶ್ರೇಯಸ್‌ ಗಿಂತಲೂ ಹಿಂದೆ ಬಿದ್ದಿದ್ದಾರೆ. 
 
ಈ ಎಲ್ಲಾ ಅಂಕಿ ಅಂಶಗಳಿಂದ ಇದೀಗ ಟೀಂ ಇಂಡಿಯಾಗೆ ಕಾಡುತ್ತಿದ್ದ ನಂ. 4ರ ಕ್ರಮಾಂಕದ ಕೊರತೆಯನ್ನು ನೀಗಿಸಲು ಶ್ರೇಯಸ್ ಅಯ್ಯರ್ ದಿ ಬೆಸ್ಟ್ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಷ್ಟೇ ಅಲ್ಲದೆ ಶ್ರೇಯಸ್ ಅಯ್ಯರ್ ನಿಧಾನವಾಗಿ ಇನ್ನಿಂಗ್ಸ್ ಕಟ್ಟುತ್ತಾ ಕೊನೆಯಲ್ಲಿ ಪಂದ್ಯ ಗೆಲ್ಲಿಸಿ ಕೊಡುವ ತಾಕತ್ತು ಹೊಂದಿರುವ ಆಟಗಾರನಾಗಿದ್ದಾರೆ.
 

మరింత సమాచారం తెలుసుకోండి: