ಮೆಲ್ಬರ್ನ್: ಪ್ರಸ್ತುತ ಟೀಂ ಇಂಡಿಯಾದ ವನಿತೆಯರು ಟಿ20 ವಿಶ್ವಕಪ್ ನಲ್ಲಿ ಮಿಂಚು ಹರಿಸುತ್ತಿದ್ದಾರೆ. ಹೌದು, ಹ್ಯಾಟ್ರಿಕ್ ಗೆಲುವಿನೊಂದಿಗೆ ಸೆಮಿಫೈನಲ್ ಟಿಕೆಟ್ ಪಡೆದಿದ್ದ ವನಿತಾ ಭಾರತ ತಂಡ ಇದೀಗ 4ನೇ ಲೀಗ್ ಪಂದ್ಯದಲ್ಲೂ ಸಹ ಶ್ರೀಲಂಕಾ ತಂಡವನ್ನು ಸೋಲಿಸುವ ಮೂಲಕ ಅಜೇಯರಾಗಿ ಲೀಗ್ ಹಂತದ ಮುಗಿಸಿದರು. 
 
ಮೆಲ್ಬರ್ನ್ನ ಜಂಕ್ಷನ್ ಓವಲ್‍ ನಲ್ಲಿ ನಡೆದ ಎ ಗುಂಪಿನ ತನ್ನ ಕೊನೆ ಪಂದ್ಯದಲ್ಲಿ ಭಾರತದ 32 ಎಸೆತಗಳು ಬಾಕಿ ಇರುವಂತೆ ಶ್ರೀಲಂಕಾವನ್ನು ಸೋಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ಭಾರತಕ್ಕೆ 114 ರನ್‍ಗಳ ಗುರಿ ನೀಡಿತ್ತು. ಭಾರತ ತಂಡ 14.4 ಓವರ್‌ಗಳಲ್ಲಿ 3 ವಿಕೆಟ್‍ಗಳನ್ನು ಕಳೆದುಕೊಂಡು ಗುರಿಯನ್ನು ತಲುಪಿತು. ಭಾರತದ ಓಪನರ್ ಶೆಫಾಲಿ ವರ್ಮಾ 47 ರನ್ (34 ಎಸೆತ, 7 ಬೌಂಡರಿ, 1 ಸಿಕ್ಸ್) ಗಳಿಸಿದರು. ಅವರು ಈ ಟೂರ್ನಿಯಲ್ಲಿ ಸತತ ಎರಡನೇ ಬಾರಿಗೆ ಅರ್ಧಶತಕ ಕೈಚೆಲ್ಲಿಕೊಂಡರು. ಕ್ಯಾಪ್ಟನ್ ಹರ್ಮನ್‍ ಪ್ರೀತ್ ಕೌರ್ ಕೊನೆಗೂ ಈ ಪಂದ್ಯದಲ್ಲಿ ಎರಡಂಕಿ ರನ್ ದಾಟಿದ್ದಾರೆ. ಆದರೆ 15 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಸ್ಮೃತಿ ಮಂದನಾ 17 ರನ್ ಗಳಿಸಿದರು.
 
ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಿ 9 ವಿಕೆಟ್ ನಷ್ಟದಲ್ಲಿ 113 ರನ್ ಗಳಿಸಿತ್ತು. ಕ್ಯಾಪ್ಟನ್ ಚಮರಿ ಅಟ್ಟಪಟ್ಟ್ 33 ರನ್ (24 ಎಸೆತ, 5 ಬೌಂಡರಿ, 1 ಸಿಕ್ಸ್) ಹಾಗೂ ಕವಿಶಾ ಡೆಲ್ಹಾರಿ 25 ರನ್ (16 ಎಸೆತ, 2 ಬೌಂಡರಿ) ಗಳಿಸಿದರು. ಉಳಿದಂತೆ 6 ಆಟಗಾರರು ಎರಡಂಕಿ ರನ್ ಗಳಿಸುವಲ್ಲಿ ವಿಫಲರಾಗಿದ್ದಾರೆ. ರಾಧಾ ಯಾದವ್ ಭಾರತ ಪರ ಅದ್ಭುತ ಬೌಲಿಂಗ್ ಮಾಡಿದರು. ಅವರು 4 ಓವರ್‌ ಗಳಲ್ಲಿ 23 ರನ್ ನೀಡಿ, 4 ವಿಕೆಟ್ ಪಡೆದರು. ಉಳಿದಂತೆ ರಾಜೇಶ್ವರಿ 2 ವಿಕೆಟ್ ಪಡೆದರೆ, ಶಿಖಾ ಪಾಂಡೆ, ದೀಪ್ತಿ ಶರ್ಮಾ ಹಾಗೂ ಪೂನಂ ಯಾದವ್ ತಲಾ ಒಂದು ವಿಕೆಟ್ ಪಡೆದರು. ಒಟ್ಟಾರೆ ಟೀಂ ಇಂಡಿಯಾ ವನಿತಾ ತಂಡ ಅಜೇಯರಾಗಿ ಲೀಗ್ ಹಂತ ಮುಗಿಸಿದೆ.

మరింత సమాచారం తెలుసుకోండి: