ದುಬೈ: ಸದ್ಯ ಕ್ರಿಕೆಟ್ ದುನಿಯಾದಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ರದ್ದೇ ಮಾತು. ಟೀಂ ಇಂಡಿಯಾದಲ್ಲಿ ದಿನಕ್ಕೊಂದು ಜವಾಬ್ದಾರಿ ಹೊರುತ್ತಿರುವ ರಾಹುಲ್ ಅದನ್ನು ಅಷ್ಟೇ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಬ್ಯಾಟಿಂಗ್ ನಲ್ಲಿ ಕಮಾಲ್ ಮಾಡುವ ಮೂಲಕ ಕಳೆದ ನ್ಯೂಜಿಲೆಂಡ್ ವಿರುದ್ಧದ ಕೊನೆಯ ಪಂದ್ಯದಲ್ಲಿ ನಾಯಕನ ಸ್ಥಾನವನ್ನು ಪಡೆದು ಗೆಲ್ಲಿಸಿದ್ದರು. ಪ್ರಸ್ತುತ ಅದ್ಭುತ ಬ್ಯಾಟಿಂಗ್ ಫಾರ್ಮ್ ನಲ್ಲಿರುವ ರಾಹುಲ್, ಟಿ20 ರಾಂಕಿಂಗ್ ನಲ್ಲೂ ಮೇಲುಗೈ ಸಾಧಿಸಿದ್ದಾರೆ. ಎಷ್ಟನೇ ಸ್ಥಾನ ಪಡೆದಿದ್ದಾರೆ ಗೊತ್ತಾ! ಇಲ್ಲಿದೆ ನೋಡಿ ಡೀಟೆಲ್ಸ್. 
 
ಭಾರತ- ನ್ಯೂಜಿಲ್ಯಾಂಡ್ ನಡುವಿನ ಟಿ20 ಸರಣಿ ಭಾನುವಾರವಷ್ಟೇ ಮುಗಿದ ಕಾರಣ ಐಸಿಸಿ ಸೋಮವಾರ ಚುಟಕು ಮಾದರಿಯ ರಾಂಕಿಂಗ್ ಬಿಡುಗಡೆ ಮಾಡಿದೆ. ಕಿವೀಸ್ ನೆಲದಲ್ಲಿ ಅದ್ಭುತ ಪ್ರದರ್ಶನ ನೀಡಿದ ಕನ್ನಡಿಗ ಕೆ ಎಲ್ ರಾಹುಲ್ ಟಿ20 ಕ್ರಿಕೆಟ್ ನಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ. ಸರಣಿಯ ಆರಂಭಕ್ಕೂ ಮುನ್ನ ಆರನೇ ಸ್ಥಾನದಲ್ಲಿದ್ದ ರಾಹುಲ್, ಐದು ಪಂದ್ಯಗಳಲ್ಲಿ 244 ರನ್ ಬಾರಿಸಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಎರಡನೇ ಸ್ಥಾನದಲ್ಲಿದ್ದ ಅರೋನ್ ಫಿಂಚ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಮೊದಲ ಸ್ಥಾನದಲ್ಲಿ ಬಾಬರ್ ಅಜಮ್ ಮುಂದುವರಿದಿದ್ದಾರೆ.
 
ಸರಣಿಯಲ್ಲಿ ಎರಡು ಅರ್ಧಶತಕ ಬಾರಿಸಿರುವ ಹಿಟ್ ಮ್ಯಾನ್ ರೋಹಿತ್ ಶರ್ಮಾ ಮೂರು ಸ್ಥಾನಗಳ ಮುನ್ನಡೆ ಪಡೆದು 10ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಟಾಪ್ 10 ನಲ್ಲಿರುವ ಮತ್ತೋರ್ವ ಭಾರತೀಯನೆಂದರೆ ವಿರಾಟ್ ಕೊಹ್ಲಿ (9). ಬೌಲರ್ ಗಳ ಪಟ್ಟಿಯಲ್ಲಿ ಟಿ20 ಕ್ರಿಕೆಟ್ ಗೆ ಕಮ್ ಬ್ಯಾಕ್ ಮಾಡಿರುವ ಭಾರತ ಜಸ್ಪ್ರೀತ್ ಬುಮ್ರಾ 26 ಸ್ಥಾನಗಳಷ್ಟು ಜಿಗಿದಿದ್ಧಾರೆ. ಬುಮ್ರಾ ಸದ್ಯ ವೆಸ್ಟ್ ಇಂಡೀಸ್ ನ ಶೆಲ್ಡನ್ ಕಾಟ್ರಲ್ ಜೊತೆ 11 ನೇ ಸ್ಥಾನವನ್ನು ಜಂಟಿಯಾಗಿ ಹಂಚಿಕೊಂಡಿದ್ದಾರೆ. ಟಾಪ್ 10ರಲ್ಲಿ ಭಾರತದ ಯಾವೊಬ್ಬ ಬೌಲರ್ ಕೂಡಾ ಸ್ಥಾನ ಪಡೆದಿರುವುದು ಅಭಿಮಾನಿಗಳಿಗೆ ಕೊಂಚ ಬೇಸರ ತರಿಸಿರೋದು ಮಾತ್ರ ಗ್ಯಾರಂಟಿ. ಆದರೆ ಕನ್ನಡಿಗ ರಾಹುಲ್ ಮಾತ್ರ ಇದೇ ರೀತಿ ಅಬ್ಬರಿಸುತ್ತಾ ಟೀಂ ಇಂಡಿಯಾ ವನ್ನು ಗೆಲ್ಲಿಸಲಿ ಎಂಬುದೇ ಅಭಿಮಾನಿಗಳ ಆಶಯವಾಗಿದೆ.

మరింత సమాచారం తెలుసుకోండి: