
ಹಾವೇರಿ: ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರು ಎಂದು ಸುಪ್ರೀಂ ಹೇಳಿದ್ದು, ಇದೀಗ ಅನರ್ಹರನ್ನು ಮತದಾರ ಪ್ರಭು ಒಪ್ಪಿ ಅಪ್ಪಿಕೊಳ್ಳುತ್ತಾರೋ ಇಲ್ಲವೇ ಮನೆಗೆ ಕಳುಹಿಸಿ ತ್ತಾರೋ ಎಂಬುದು ಕುತೂಹಲ ಕೆರಳಿಸಿದೆ.
ಅದರಲ್ಲೂ ಹಾವೇರಿ ಜಿಲ್ಲೆಯ ಹೀರೆಕೆರೂರು ಮತ್ತು ರಾಣಿಬೆನ್ನೂರು ಕ್ಷೇತ್ರಗಳ ಅನರ್ಹ ಶಾಸಕರ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ದೊರತಿದೆ. ಉಪ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವುದರಿಂದ ಮತದಾರರನ್ನು ಸೆಳೆಯುವ ಸವಾಲನ್ನು ಅನರ್ಹ ಶಾಸಕರು ಎದುರಿಸಬೇಕಿದೆ. ಹಿರೇಕೆರೂರು ಕ್ಷೇತ್ರ ಬಿ.ಸಿ. ಪಾಟೀಲ ಮತ್ತು ರಾಣಿಬೆನ್ನೂರು ಕ್ಷೇತ್ರ ಆರ್. ಶಂಕರ್ ಅವರು ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಸುಪ್ರೀಂ ಕೋರ್ಟ್ ಅವಕಾಶ ನೀಡಿದೆ. ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದ ಇವರಿಬ್ಬರಿಗೂ ಉಪಚುನಾವಣೆಯಲ್ಲಿ ಎದುರಿಸಲು ಅವಕಾಶ ಸಿಗುತ್ತದೆಯೋ ಇಲ್ಲವೋ ಎಂಬುದರ ಬಗ್ಗೆ ಇದ್ದ ಆತಂಕ ದೂರವಾಗಿದೆ. ಆದರೆ, ರಾಣಿಬೆನ್ನೂರು ಕ್ಷೇತ್ರದ ಲೆಕ್ಕಾಚಾರ ತಲೆಕೆಳಗಾಗಿದೆ. ಅಲ್ಲಿ ಉಪಚುನಾವಣೆ ನಡೆಯುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿತ್ತು. ಆದರೆ, ಸುಪ್ರೀಕೋರ್ಟ್ ಉಳಿದ ಅನರ್ಹ ಶಾಸಕರಿಗೆ ನೀಡಿದಂತೆ ಆರ್. ಶಂಕರ್ ಪ್ರಕರಣದಲ್ಲೂ ತೀರ್ಪು ನೀಡಿದೆ. ಆದ್ದರಿಂದ ಉಪಚುನಾವಣೆ ನಡೆಯಲಿದ್ದು, ಆರ್. ಶಂಕರ್ ಸ್ಪರ್ಧೆಗೆ ಅವಕಾಶ ನೀಡಿದೆ. ಆದ್ದರಿಂದ ಉಪಚುನಾವಣೆ ಬಗ್ಗೆ ಇದ್ದ ಗೊಂದಲ ನಿವಾರಣೆ ಯಾದಂತಾಗಿದ್ದು, ಪ್ರಚಾರ ಇದೀಗ ಶುರುವಾಗಲಿದೆ.
ರಾಣಿಬೆನ್ನೂರು ಕ್ಷೇತ್ರದಿಂದ ಒಂದೂವರೆ ವರ್ಷಗಳ ಹಿಂದಷ್ಟೇ ಕೆಪಿಜೆಪಿಯಿಂದ ಗೆದ್ದಿದ್ದ ಆರ್. ಶಂಕರ್ ಅವರಿಗೆ ಈಗ ಮತ್ತೆ ಚುನಾವಣೆ ಎದುರಿಸುವ ದೊಡ್ಡ ಸವಾಲು ಎದುರಾಗಿದೆ. ಕಾಂಗ್ರೆಸ್ನೊಂದಿಗೆ ಕೆಪಿಜೆಪಿ ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳದ್ದರಿಂದ ತಮ್ಮನ್ನು ಅನರ್ಹಗೊಳಿಸಿರುವ ಸ್ಪೀಕರ್ ಆದೇಶ ಅಸಿಂಧುಗೊಳಿಸಬೇಕು ಎಂಬುದು ಶಂಕರ್ ಅವರ ವಾದವಾಗಿತ್ತು. ಇದನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡು ತಮ್ಮ ಶಾಸಕತ್ವ ಉಳಿಯುತ್ತದೆ ಎಂದುಕೊಂಡಿದ್ದರು.
ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆ ನೀಡಿದ್ದ ಬಿ.ಸಿ. ಪಾಟೀಲರ ಸ್ಪರ್ಧೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ವಿಪ್ ಉಲ್ಲಂಘನೆ ಕಾರಣಕ್ಕಾಗಿ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದ ಪಾಟೀಲರಿಗೆ ಸುಪ್ರೀಂ ಕೋರ್ಟ್ ತೀರ್ಪು ಸಮಾಧಾನ ತಂದಿದೆ. ಇದೀಗ ಚುನಾವಣಾ ಕಣ ರಂಗೇರಿದ್ದು ಮತದಾರ ಏನಂತಾರೆ ಎಂಬುದು ಕಾದು ನೋಡಬೇಕಾಗಿದೆ.
Please do not make derogatory comments, comments those attack any person directly, indirectly, comments those create societal pressures, comments those are not ethical & moral. Please do support us to moderate and remove the comments which doesn't fit to this comment policy - India Herald Group