ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಆರೋಗ್ಯ ಸಚಿವ ಶ್ರೀರಾಮುಲು ತೊಡೆ ತಟ್ಟಿ ಅಖಾಡಕ್ಕೆ ಪಂಥಾಹ್ವಾನ ನೀಡಿದ್ದಾರೆ. ಬನ್ನಿ ಸಿದ್ದರಾಮಯ್ಯ ನವರೇ ನೋಡಿ ಬಿಡೋಣಾ ನೀವಾ ಇಲ್ಲ ನಾನಾ ಎಂದು ಗುಡುಗಿದ್ದಾರೆ. ಏನಿದು ಟ್ವೀಟರ್ ವಾರ್. ಇಲ್ಲಿದೆ ನೋಡಿ ಉತ್ತರ. 
 
ಪ್ರಸ್ತುತ ನಾಮಪತ್ರ ಸಲ್ಲಿಕೆ ಮುಕ್ತಾಯವಾಗಿರುವ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಸಮಯದಲ್ಲೂ ಮತ್ತದೇ ಮಾತಿನ ಸಮರ ಮುಂದುವರಿಸಿದ್ದು, ಸಿದ್ದುಗೆ ರಾಮುಲು ಪಂಥಾಹ್ವಾನ ಕೊಟ್ಟಿದ್ದಾರೆ. ಮಿನಿ ಸಮರದಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ಬಿ.ಶ್ರೀರಾಮುಲು ನಡುವೆ ಆರೋಪ-ಪ್ರತ್ಯಾರೋಪ ಮುಂದುವರಿದಿದೆ.ಟ್ವೀಟ್ ಮೂಲಕ ಒಬ್ಬರಿಗೊಬ್ಬರು ಬೈದಾಡಿಕೊಂಡಿದ್ದು, ಸಿದ್ದರಾಮಯ್ಯ ಅವರಿಗೆ ಶ್ರೀರಾಮುಲು ಪಂಥಾಹ್ವಾನ ಕೊಟ್ಟಿದ್ದಾರೆ.
 
ಸಿದ್ದು ಮೊದಲಿಗೆ ಟ್ವೀಟ್  ಮೂಲಕ ಶ್ರೀರಾಮುಲುಗೆ ಗುದ್ದು ಕೊಟ್ಟ, ಸಚಿವ ಶ್ರೀರಾಮುಲು ನನ್ನ ವಿರುದ್ಧ ಚುನಾವಣೆಯಲ್ಲಿ ಸೋತಿದ್ದರು, ಪಾಪ ಇನ್ನೂ ಆ ಹತಾಶೆಯಿಂದ ಹೊರಬಂದಂತೆ ಕಾಣುತ್ತಿಲ್ಲ. ಅದಕ್ಕೆ‌ ಬಾಯಿಗೆ ಬಂದಂತೆ ಮಾತನಾಡುತ್ತಾರೆ.  ಅವರಿಗೆ ಮಾನ ಮರ್ಯಾದೆ ಇದ್ದರೆ ಹಿಂದೆಯೇ ರಾಜೀನಾಮೆ ಕೊಡಬೇಕಿತ್ತು. ಅವರನ್ನು ಉಪಮುಖ್ಯಮಂತ್ರಿ ಮಾಡುತ್ತೇವೆಂದು ಪ್ರಚಾರ ಮಾಡಿದ್ದರು. ಕೊನೆಗೆ ಉಪಮುಖ್ಯಮಂತ್ರಿ ಮಾಡಿದರಾ? ಎಂದು ಕಾಲೆಳೆದರು.
 
ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಶ್ರೀರಾಮುಲು ಸಹ ಟ್ವೀಟ್ ಮೂಲಕ ತಿರುಗೇಟು ನೀಡಿದ್ದು,  ಮಾನ್ಯ ಸಿದ್ದರಾಮಯ್ಯನವರೇ, ನಿಮಗೊಂದು ಸವಾಲು. ಬಾದಾಮಿಯಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡು ನೀವು ಗೆದ್ದಿರಬಹುದು. ಮೀಸಲಾತಿ ಇಲ್ಲದ ಕ್ಷೇತ್ರವಾದರೂ ಸರಿಯೇ ನನ್ನ ವಿರುದ್ಧ ಗೆದ್ದು ತೋರಿಸಿ. ಶಾಸಕ‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬನ್ನಿ. ನಾನೂ ರಾಜೀನಾಮೆ ಕೊಟ್ಟು ಬರುತ್ತೇನೆ.
 
ಜನ ಯಾರನ್ನು ಗೆಲ್ಲಿಸುತ್ತಾರೋ ನೋಡಿಯೇ ಬಿಡೋಣ ಎಂದು ಸವಾಲು ಹಾಕಿದ್ದಾರೆ. ಕಳೆದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ಶ್ರೀರಾಮುಲು ಅವರನ್ನು ಸೋಲಿಸಿದ್ದರು. ಇದೀಗ ರಾಜೀನಾಮೆ ಕೊಟ್ಟು ಬನ್ನಿ ಮತ್ತೆ ಎಲೆಕ್ಷನ್ ಗೆ ಹೋಗೋಣ ಎಂದು ರಾಮುಲು ಸವಾಲು ಎಸೆದಿದ್ದಾರೆ. ಈ ಹಿಂದೆ ಬಳ್ಳಾರಿ ಲೋಸಕಭಾ ಉಪಚುನಾವಣೆ ವೇಳೆ ಶ್ರೀರಾಮುಲು ಹಾಗೂ ಸಿದ್ದರಾಮಯ್ಯ ನಡುವೆ ಮಾತಿನ ಸಮರ ನಡೆದಿತ್ತು. ಇದೀಗ ಅದು ವಿಧಾನಸಭಾ ಉಪಚುನಾವಣೆಯಲ್ಲೂ ಮುಂದುವರಿದಿದೆ.

మరింత సమాచారం తెలుసుకోండి: