ಬೆಂಗಳೂರು: ಮಾಜಿ ಸಚಿವ ಡಿ. ಕೆ ಶಿವಕುಮಾರ್ ಪ್ರಸ್ತುತ ರಾಜ್ಯ ಕಾಂಗ್ರೆಸ್ ನ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದು, ನಾವು ಡಿಕೆ ಶಿವಕುಮಾರ ಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಕಾರಣಕ್ಕೂ ಲಾಭ ಮಾಡಿ ಕೊಡಬಾರದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. 
 
ಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿಚಾರವಾಗಿ ಬಿಜೆಪಿ ಎಚ್ಚರಿಕೆ ಹೆಜ್ಜೆ ಇಡಲು ಮುಂದಾಗಿದೆ. ಪೌರತ್ವ ಬಿಸಿಯಿಂದ ನರಳುತ್ತಿರುವ ಬಿಜೆಪಿಗೆ ಮತ್ತೊಂದು ತಲೆನೋವು ಮೈಮೇಲೆ ಎಳೆದುಕೊಳ್ಳಲು ತಯಾರಿಲ್ಲ. ಹಾಗಾಗಿ ಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣಕ್ಕೆ ಪ್ರತಿರೋಧ ಹೇಳಿಕೆಗಳನ್ನು ಕೊಡದೇ ಕಾನೂನಾತ್ಮಕ ಅಸ್ತ್ರ ಬಳಸಲು ಮುಂದಾಗ್ತಿದೆ. ಈ ಬೆನ್ನಲ್ಲೇ ಸಚಿವ ಸಂಪುಟ ಸಭೆಯಲ್ಲಿ ಸಚಿವರುಗಳಿಗೆ ಸಿಎಂ ಯಡಿಯೂರಪ್ಪ ಕಿವಿಮಾತು ಹೇಳಿದ್ದಾರೆ.
 
ಏಸು ಪ್ರತಿಮೆ ವಿರುದ್ಧ ಧ್ವನಿ ಎತ್ತಿ ರಾಡಿ ಮಾಡಿಕೊಳ್ಳಬೇಡಿ, ಸರ್ಕಾರಿ ಗೋಮಾಳ ಜಮೀನು ಕಾನೂನಾತ್ಮಕವಾಗಿ ಇದೆಯೋ ಇಲ್ಲವೋ ನೋಡೋಣ. ಈಗಾಗಲೇ ವರದಿ ಕೇಳಿದ್ದು, ಜಿಲ್ಲಾಧಿಕಾರಿ ವರದಿ ಕೊಟ್ಟ ಬಳಿಕ ಕಾನೂನಾತ್ಮಕವಾಗಿ ಕ್ರಮ ಕೈಗೊಂಡು ಸುಮ್ಮನೆ ಆಗೋಣ. ವಿಷಯ ದೊಡ್ಡದು ಮಾಡಿ ಡಿಕೆಶಿ ಹಾಗೂ ಕಾಂಗ್ರೆಸ್ ಲಾಭ ಮಾಡಿಕೊಡೋದು ಬೇಡ. ಈಗಾಗಲೇ ಪೌರತ್ವ ಕಾಯಿದೆ ಬಿಸಿ ಇದೆ. ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣ ವಿರೋಧ ವಿಷಯದಲ್ಲಿ ಎಚ್ಚರಿಕೆ ಹೆಜ್ಜೆ ಇಡಬೇಕು ಅಂತಾ ಸಚಿವ ಸಂಪುಟ ಸಭೆಯಲ್ಲಿ ಸಚಿವರಿಗೆ ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನು ಓದಿ: “ಏಸು ಪ್ರತಿಮೆ ನಿರ್ಮಾಣಕ್ಕೆ ವಿರೋಧಿಸಲ್ಲ, ಕೃಷ್ಣನೂ ಒಂದೇ, ಏಸುವೂ ಒಂದೇ, ಆದರೆ..”
 
ಈ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ, ರಾಮನಗರ ಜಿಲ್ಲೆ ಕಪಾಲಿ ಬೆಟ್ಟದ ಜಮೀನು ವಿವಾದದ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿಲ್ಲ, ಆ ಪ್ರಸ್ತಾವನೆಯೂ ಇವತ್ತಿನ ಸಂಪುಟದಲ್ಲಿ ಇರಲಿಲ್ಲ ಅಂತಾ ರಕ್ಷಣಾತ್ಮಕ ಹೇಳಿಕೆ ಕೊಟ್ಟು ಜಾರಿಕೊಂಡಿದ್ದಾರೆ. ಆದರೆ ಈ ವಿಚಾರ ಮುಂದೆ ಯಾವ ರೀತಿಯ ತಿರುವುಗಳನ್ನು ಪಡೆಯಲಿದೆ ಎಂದು ಕಾದು  ನೋಡಬೇಕಾಗಿದೆ.
 
 
 
 

మరింత సమాచారం తెలుసుకోండి: