ಬೆಂಗಳೂರು: ಜನತಾ ನ್ಯಾಯಾಲಯದಲ್ಲಿ 15 ಕ್ಷೇತ್ರಗಳ ಪೈಕಿ 12 ಕ್ಷೇತ್ರ ಗೆದ್ದಿರುವ ಅನರ್ಹರು ಇದೀಗ ಅರ್ಹರಾಗಿದ್ದಾರೆ.  ಸಿಎಂ ಯಡಿಯೂರಪ್ಪ ಅವರ ವಚನ ಹಾಗೂ ಬಿಜೆಪಿ. ಮೂಲನಿವಾಸಿಗಳ ಹಿತಾಸಕ್ತಿ ನಡುವಿನ ಸಂಘರ್ಷದಿಂದಾಗಿ ಬಹು ನಿರೀಕ್ಷಿತ ಸಂಪುಟ ವಿಸ್ತರಣೆ ಕಗ್ಗಂಟಿನ ಹಾದಿ ಹಿಡಿದಿದೆ. ದಿಲ್ಲಿ ವಿಧಾನಸಭೆ ಚುನಾವಣೆಗೆ ತೆರೆ ಬೀಳುವವರೆಗೂ ಸಂಪುಟ ವಿಸ್ತರಣೆಯಾಗುವ ಲಕ್ಷಣವಿಲ್ಲ ಎನ್ನಲಾಗುತ್ತಿದೆ.
 
ಉಪ ಚುನಾವಣೆಯಲ್ಲಿ ಗೆದ್ದವರಲ್ಲಿ 11 ಮಂದಿ ಅರ್ಹ ಶಾಸಕರಿದ್ದಾರೆ. ವಲಸೆ ಬಂದಿರುವ ಇವರಿಗೆಲ್ಲ ತಕ್ಷಣವೇ ಮಹತ್ವದ ಸ್ಥಾನಮಾನ ನೀಡಿದರೆ ಬೇರೆಯದೇ ಸಂದೇಶ ಹೋಗುತ್ತದೆ. ಪಕ್ಷ ನಿಷ್ಠರು ಬೇಸರ ಮಾಡಿಕೊಳ್ಳುತ್ತಾರೆ. ಹಾಗಾಗಿ ವಲಸಿಗರು-ಪಕ್ಷ ನಿಷ್ಠರ ನಡುವೆ ಸಮತೋಲನ ಸಾಧಿಸಿ ಸಂಪುಟ ವಿಸ್ತರಿಸಬೇಕು ಎಂಬ ಒತ್ತಡ ಪಕ್ಷದ ಒಳಗಿದೆ. ಈ ವಿಚಾರವನ್ನು ಹೈಕಮಾಂಡ್‌ ಕಿವಿಗೂ ಮುಟ್ಟಿಸಲಾಗಿದೆ. ಇದೇ ಕಾರಣದಿಂದ ಬಿಎಸ್‌ವೈ ಅವರಿಗೆ ಸ್ವಲ್ಪ ತಾಳುವಂತೆ ಅಮಿತ್‌ ಶಾ ಸೂಚಿಸಿದ್ದಾರೆ ಎನ್ನಲಾಗಿದೆ.
 
ಈ ಬಾರಿ 8 ಮಂದಿಯನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಸಲು ಹೈಕಮಾಂಡ್‌ಗೆ ಒಲವಿದೆ. ಇವರಲ್ಲಿ ಅರ್ಹ ಶಾಸಕರ ಕೋಟಾದಿಂದ 6 ಮಂದಿಯಿರುತ್ತಾರೆ. ಉಳಿದೆರಡು ಸ್ಥಾನವನ್ನು ಮೂಲ ಬಿಜೆಪಿ ಶಾಸಕರಿಗೆ ನೀಡಲಾಗುತ್ತದೆ. ಇದು ಬಹುಮಟ್ಟಿಗೆ ಹೈಕಮಾಂಡ್‌ನ ಸೂತ್ರವೂ ಆಗಿದೆ. ಆದರೆ, ಇದು ಬಿ.ಎಸ್‌.ವೈ ಅವರಿಗೆ ಇಷ್ಟವಿಲ್ಲ. ಯಾಕೆಂದರೆ ಈ ಸರಕಾರ ರಚನೆಗೆ ಕಾರಣರಾದ ಹೊಸ ಶಾಸಕರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಅನಿವಾರ್ಯತೆಯಲ್ಲಿ ಸಿಎಂ ಸಿಲುಕಿದ್ದಾರೆ. ಮಹೇಶ್‌ ಕುಮಠಳ್ಳಿ, ಶ್ರೀಮಂತ ಪಾಟೀಲ್‌ ಅವರನ್ನು ಬೇಕಾದರೆ ಸಂಪುಟದಿಂದ ಹೊರಗಿಡಬಹುದು. ಉಳಿದ 9 ಮಂದಿಗೆ ಮಂತ್ರಿ ಸ್ಥಾನ ನೀಡಲೇಬೇಕೆಂದು ಯಡಿಯೂರಪ್ಪ ಪಟ್ಟು ಹಾಕುತ್ತಿದ್ದಾರೆ. 
 
ಜನವರಿ 18ರಂದು ಹುಬ್ಬಳ್ಳಿಯಲ್ಲಿ ನಡೆಯುವ ಸಮಾವೇಶದಲ್ಲಿ ಭಾಗಿಯಾಗುವ ಉದ್ದೇಶದಿಂದ ಅಮಿತ್‌ ಶಾ ಅವರು ಜನವರಿ 17ರ ರಾತ್ರಿಯೇ ರಾಜ್ಯಕ್ಕೆ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿಸಂಪುಟ ವಿಸ್ತರಣೆ ಬಗ್ಗೆ ಅವರೊಂದಿಗೆ ಪ್ರಾಥಮಿಕ ಹಂತದ ಚರ್ಚೆ ನಡೆಸುವ ಸಾಧ್ಯತೆಯೂ ಇದೆ. ಆದರೆ, ದಿಲ್ಲಿಯಲ್ಲಿ ಚರ್ಚೆ ನಡೆಸಿದ ಬಳಿಕವೇ ಅಂತಿಮ ತೀರ್ಮಾನವಾಗಲಿದೆ. ವಿಳಂಬದಿಂದ ಅರ್ಹ ಶಾಸಕರು ಈಗಾಗಲೇ ಅಸಮಾಧಾನ ಹೊರಹಾಕುತ್ತಿದ್ದಾರೆ.

మరింత సమాచారం తెలుసుకోండి: