ಬೆಂಗಳೂರು: ಇಂದು ರಾಷ್ಟ್ರಮಟ್ಟದಲ್ಲಿ ಬೇರೆ ಪಕ್ಷಗಳಿರಬಹುದು. ಅವು ರಾಜ್ಯದಲ್ಲಿಯೂ ಅದೇ ಸರ್ಕಾರ ಇರಬಹುದು. ಆದರೆ ನಮ್ಮ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಮುಖ್ಯ. ಅದನ್ನು ಉಳಿಸಲು ಇನ್ಮುಂದೆ ನಾನು ತುಂಬಾ ಶ್ರಮಿಸುತ್ತೇನೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಭರವಸೆಯ ಮಾತುಗಳನ್ನಾಡಿದ್ದಾರೆ. 
 
ನಗರದ ಜೆಪಿ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಲೋಕಸಭೆ ಹಾಗೂ ವಿಧಾನಸಭೆ ಉಪಚುನಾವಣೆ ಮುಗಿದ ಬಳಿಕ ಪಕ್ಷದ ಕಾರ್ಯ ಚಟುವಟಿಕೆ ಸ್ಥಗಿತ ಆಗಿತ್ತು. ನಾನು ಆಯುರ್ವೇದ ಚಿಕಿತ್ಸೆಗೆ ತೆರಳಿದ್ದೆ. ಇನ್ನೂ ಚಿಕಿತ್ಸೆ ಅಗತ್ಯವಿದ್ದರೂ ನನಗೆ ಸಮಾಧಾನ ಇರಲಿಲ್ಲ. ಹೀಗಾಗಿ ನಾನು ತಕ್ಷಣವೇ ಬಂದಿದ್ದೇನೆ ಎಂದರು. 23ರಂದು ಅರಮನೆ ಮೈದಾನದಲ್ಲಿ ಪಕ್ಷದ ಸಮಾವೇಶ ನಡೆಯಲಿದೆ. ಹಾಲಿ, ಮಾಜಿ ಶಾಸಕರು, ಸೋತ ಅಭ್ಯರ್ಥಿಗಳು, ಸಂಸದರು ಮಾಜಿ ಸಂಸದರು ಸೇರಿ ಎಲ್ಲ ಚುನಾಯಿತ ಸದಸ್ಯರ ಸಮಾವೇಶ ಮಾಡಲಿದ್ದೇವೆ. ತಾಲೂಕು, ಜಿಲ್ಲಾಮಟ್ಟದ ನಾಯಕರ ಸಮಾವೇಶ ನಡೆಯಲಿದೆ. ಇದು ಈ ವರ್ಷದ ಮೊದಲ ಕಾರ್ಯಕ್ರಮವಾಗಿದ್ದು, ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಸೇರಲು ನಿರ್ಣಯಿಸಲಾಗಿದೆ ಎಂದಿದ್ದಾರೆ.
 
ಎರಡೂ ರಾಜ್ಯದ ಘಟಕಗಳು ಚುನಾವಣಾ ಆಯೋಗದ ಮಾನ್ಯತೆ ಹೊಂದಿದೆ. ಕೇರಳ ಮತ್ತು ಕರ್ನಾಟಕದಲ್ಲಿ ಪ್ರಬಲವಾಗಿದೆ. ಬೇರೆ ಕಡೆಯೂ ಜೆಡಿಎಸ್ ಪಕ್ಷವಿದೆ, ಆದರೆ ಪ್ರಬಲವಾಗಿಲ್ಲ. ಇನ್ನು ಮುಂದೆ ರಾಷ್ಟ್ರೀಯ ಕಾರ್ಯಕಾರಿ ಸಭೆ, ಪಕ್ಷದ ಕಾರ್ಯ ಚಟುವಟಿಕೆ ನಿರಂತರ ನಡೆಯುತ್ತದೆ. ನಾನು ಇನ್ಮುಂದೆ ಸುಮ್ಮನೆ ಕೂರುವುದಿಲ್ಲ ಪ್ರಾದೇಶಿಕ ಪಕ್ಷ ಉಳಿಸಲು ಶ್ರಮಿಸುತ್ತೇನೆ. ತಮಿಳುನಾಡು, ಆಂಧ್ರ, ಕೇರಳ, ಒರಿಸ್ಸಾ ನೋಡಿದರೆ ಅಲ್ಲಿ ಪ್ರಾದೇಶಿಕ ಪಕ್ಷ ಗಟ್ಟಿಯಾಗಿ ಉಳಿದಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆ ಸರ್ಕಾರ ಅಸ್ತಿತ್ವದಲ್ಲಿದೆ. ಪ್ರಾದೇಶಿಕ ಪಕ್ಷ ಉಳಿಸಿದರೆ ರಾಷ್ಟ್ರದ ಬೆಳವಣಿಗೆಗೆ ನಮ್ಮದೂ ಸಣ್ಣ ಪಾತ್ರವಿರುತ್ತದೆ ಎಂದಿದ್ದಾರೆ.
 
ಪ್ರಾದೇಶಿಕ ಪಕ್ಷಗಳು ಸ್ಥಳೀಯ ಮಟ್ಟದಲ್ಲಿ ಮುಖ್ಯವಾಗಿರುತ್ತದೆ. ರಾಷ್ಟ್ರ ಮಟ್ಟದಲ್ಲಿ ಇನ್ನು ಮುಂದೆ ಸಭೆಗಳನ್ನು ನಡೆಸುತ್ತೇವೆ, ಪ್ರಾದೇಶಿಕ ಪಕ್ಷಗಳ ಉಳಿವಿಗೆ ಶ್ರಮಿಸುತ್ತೇನೆ ಎಂದ ದೇವೆಗೌಡರ ಮಾತು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತದೆ ಎಂದು ಕಾದು ನೋಡ ಬೇಕಾಗಿದೆ.

మరింత సమాచారం తెలుసుకోండి: