ಹುಬ್ಬಳ್ಳಿ: ಪೌರತ್ವ ಜಾಗೃತಿ ಮೂಡಿಸುವ ಸಲುವಾಗಿ ಹುಬ್ಬಳ್ಳಿಗೆ ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ರಿಂದ ರಾಜ್ಯ ಸಂಪುಟ ಸಭೆ ವಿಸ್ತರಣೆ ಮಾಡುವುದಕ್ಕೆ ಗ್ರೀನ್ ಸಿಗ್ನಲ್ ನೀಡಲೇ ಇಲ್ಲ. ಇದರಿಂದ ಸಾರ್ವಜನಿಕ ವೇದಿಕೆಗಳಲ್ಲಿ ಋಣ ಋಣ ಎಂದು ಮಾತನಾಡುತ್ತಿದ್ದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಬೇಸರ ಉಂಟಾಗಿದೆ. 
 
ದಾವೋಸ್‌ ಪ್ರವಾಸ ಮುಗಿಸಿ, ದೆಹಲಿಗೆ ಬನ್ನಿ, ಬಳಿಕ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸೋಣ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು, ಬಿಎಸ್‌ವೈಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಯಡಿಯೂರಪ್ಪ ಅವರು, ಸಂಪುಟ ವಿಸ್ತರಣೆ ಕುರಿತು ಪ್ರಸ್ತಾಪಿಸಿ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಶಾಸಕರ ಪೈಕಿ 11 ಮಂದಿಗೆ ಸಚಿವ ಸ್ಥಾನ ನೀಡಬೇಕಿದೆ. ಈಗಾಗಲೇ ತಡವಾಗಿದ್ದು ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡಬೇಕಿದೆ ಎಂದು ಹೇಳಿದರು. ಸಂಪುಟ ವಿಸ್ತರಣೆಗೆ ನಮ್ಮ ಆಕ್ಷೇಪಣೆಯೇನೂ ಇಲ್ಲ. ನೀವು ವಿದೇಶ ಪ್ರವಾಸ ಮುಗಿಸಿ ದೆಹಲಿಗೆ ಬನ್ನಿ ಜೆ.ಪಿ.ನಡ್ಡಾ, ಬಿ.ಎಲ್‌.ಸಂತೋಷ್‌ ಅವರ ಸಮ್ಮುಖದಲ್ಲಿ ಚರ್ಚಿಸಿ ಅಂತಿಮಗೊಳಿಸೋಣ ಎಂದು ತಿಳಿಸಿದರು ಎಂದು ಮೂಲಗಳು ತಿಳಿಸಿವೆ. ಹೀಗಾಗಿ, ಬಹುತೇಕ ಜ.27 ಅಥವಾ 28 ರಂದು ಸಂಪುಟ ವಿಸ್ತರಣೆಯಾಗಲಿದೆ ಎಂದು ಹೇಳಲಾಗಿದೆ. ಈ ಮಧ್ಯೆ, ಉಪ ಮುಖ್ಯಮಂತ್ರಿ ವಿಚಾರವೂ ಪ್ರಸ್ತಾಪವಾಗಿ ನಾಲ್ವರು ಉಪ ಮುಖ್ಯಮಂತ್ರಿಗಳ ನೇಮಕಕ್ಕೆ ಅಮಿತ್‌ ಶಾ ಒಲವು ತೋರಿದರು. ಹಾಲಿ ಇರುವವರಲ್ಲಿ ಒಬ್ಬರನ್ನು ತೆಗೆದು ಹೊಸದಾಗಿ ಇಬ್ಬರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಚರ್ಚೆಯಾಯಿತು ತಿಳಿದುಬಂದಿದೆ. 
 
ಶ್ರೀರಾಮುಲು ಹಾಗೂ ರಮೇಶ್‌ ಜಾರಕಿಹೊಳಿ ಉಪ ಮುಖ್ಯಮಂತ್ರಿ ಆಕಾಂಕ್ಷಿಗಳಾಗಿರುವ ಬಗ್ಗೆಯೂ ಪ್ರಸ್ತಾಪವಾಯಿತು. ಎಲ್ಲ ವಿಚಾರಗಳನ್ನು ಚರ್ಚಿಸಿ ಆ ನಂತರ ಎಲ್ಲವನ್ನೂ ತೀರ್ಮಾನ ಮಾಡೋಣ ಎಂದು ಅಮಿತ್‌ ಶಾ ಹೇಳಿದರು ಎನ್ನಲಾಗಿದೆ. ಹುಬ್ಬಳ್ಳಿಯಲ್ಲಿ ಸಿಎಎ ಪರ ಜಾಗೃತಿಯಲ್ಲಿ ಪಾಲ್ಗೊಂಡ ನಂತರ ಡೆನಿಸನ್‌ ಹೋಟೆಲ್‌ ನಲ್ಲಿ ತಂಗಿದ್ದ ಅಮಿತ್‌ ಶಾ ಅವರನ್ನು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ, ಶಾಸಕರಾದ ಮಹೇಶ್‌ ಕುಮಟಳ್ಳಿ, ಶ್ರೀಮಂತ ಪಾಟೀಲ್‌, ಬಿ.ಸಿ.ಪಾಟೀಲ್‌ ಭೇಟಿ ಮಾಡಿ ಚರ್ಚಿಸಿದ್ದಾರೆ.

మరింత సమాచారం తెలుసుకోండి: