ನವದೆಹಲಿ: ಭಾರತ ಮತ್ತು ಅಮೆರಿಕ ದೊಡ್ಡ ಮೊತ್ತದ ರಕ್ಷಣಾ ಒಪ್ಪಂದಕ್ಕೆ ಮಂಗಳವಾರ ಸಹಿ ಹಾಕಿವೆ ಎಂದು ಜಂಟಿ ಸುದ್ದಿಗೋಷ್ಠಿ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹೇಳಿದ್ದಾರೆ. ಜೊತೆಗೆ ಎರಡೂ ದೇಶಗಳು ಜಾಗತಿಕ ಮಟ್ಟದಲ್ಲಿ ತಮ್ಮ ಪಾಲುದಾರಿಕೆಯನ್ನು ಅಭಿವೃದ್ಧಿಗೊಳಿಸಲು ನಿರ್ಧರಿಸಿದ್ದಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು. 
 
ಅಷ್ಟಕ್ಕೂ ಅಮೆರಿಕ ಮತ್ತು ಭಾರತ ಮಾಡಿಕೊಂಡಿರುವ ರಕ್ಷಣಾ ಒಪ್ಪಂದದ ಮೊತ್ತವೆಷ್ಟು ಗೊತ್ತಾ! ಬರೋಬ್ಬರಿ 3 ಬಿಲಿಯನ್ ಯುಎಸ್ ಡಾಲರ್ ಗಳ ಒಪ್ಪಂದ. ಹೌದು, ಅಮೆರಿಕ ಮತ್ತು ಭಾರತದ ನಡುವೆ ಹೆಚ್ಚುತ್ತಿರುವ ಕಾರ್ಯತಂತ್ರ ಪಾಲುದಾರಿಕೆಯನ್ನು ಈ ರಕ್ಷಣಾ ಒಪ್ಪಂದ ಪ್ರತಿಬಿಂಬಿಸುತ್ತದೆ. 3 ಬಿಲಿಯನ್​ ಯುಎಸ್​ ಡಾಲರ್ ​ಗಳ ರಕ್ಷಣಾ ಒಪ್ಪಂದದ ಅನ್ವಯ ಭಾರತ ಯುಎಸ್​ ನಿಂದ 2.6 ಬಿಲಿಯನ್​ ಡಾಲರ್​ ಗಳ 24 ಎಂಎಚ್-60​ ರೋಮಿಯೋ ಹೆಲಿಕಾಪ್ಟರ್​ ಗಳನ್ನು ಖರೀದಿಸಲಿದೆ. ಅದರ ಜೊತೆಗೆ 800 ಮಿಲಿಯನ್​ ಡಾಲರ್​ ಮೌಲ್ಯದ ಆರು ಎಚ್​-64ಇ ಅಪಾಚೆ ಹೆಲಿಕಾಪ್ಟರ್ ​ಗಳನ್ನು ಪಡೆಯುವ ಒಪ್ಪಂದಕ್ಕೂ ಸಹ ಮಂಗಳವಾರ ಸಹಿ ಹಾಕಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 
 
ಭಾರತ ಹಾಗೂ ಅಮೆರಿಕ ಸಮಗ್ರ ಮುಕ್ತ ವ್ಯಾಪಾರದ ಒಪ್ಪಂದ ಮಾಡಿಕೊಳ್ಳುವತ್ತ ಚಿಂತನೆ ನಡೆಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹೇಳಿದರು. ಎರಡೂ ದೇಶಗಳ ನಡುವಿನ ಸಂಬಂಧ ಈಗಿನಷ್ಟು ಉತ್ತಮವಾಗಿ ಯಾವತ್ತೂ ಇರಲಿಲ್ಲ. ಎರಡೂ ದೇಶಕ್ಕೆ ಲಾಭವಾಗುವಂತಹ ಒಪ್ಪಂದಗಳನ್ನು ಮಾಡಿಕೊಳ್ಳುವ ಆಶಯವನ್ನು ಹೊಂದಿದ್ದೇನೆ ಎಂದು ಟ್ರಂಪ್ ತಿಳಿಸಿದರು. 
 
ಈ ಹಿಂದಿನಿಂದಲೂ ಭಾರತ ಭಯೋತ್ಪಾದನೆ ವಿರುದ್ಧ ಸಿಡಿದೆದ್ದು ಭಯೋತ್ಪಾದನೆ ಹೋಗಲಾಡಿಸಲು ಪಣ ತೊಟ್ಟಿರುವ ರಾಷ್ಟ್ರವಾಗಿದ್ದು ಅದನ್ನು ಹೋಗಲಾಡಿಸಲು ಅಮೆರಿಕ ಸಹ ಕೈ ಜೋಡಿಸುವುದಾಗಿ ಟ್ರಂಪ್ ಹೇಳಿದ್ದಾರೆ. ಅಷ್ಟೇ ಅಲ್ಲದೇ ಈ ಹಿಂದಿಗಿಂತಲೂ ಭಾರತ ಮತ್ತು ಅಮೆರಿಕದ ಸಂಬಂಧ ಈಗ ಉತ್ತಮವಾಗಿದೆ ಎಂದು ಸಹ ಹೇಳಿದರು. ಇದೀಗ ಭಾರೀ ಮೊತ್ತದ ರಕ್ಷಣಾ ಒಪ್ಪಂದವಾಗಿದ್ದು ಭಾರತ ಇನ್ನು ರಕ್ಷಣಾ ಕ್ಷೇತ್ರದಲ್ಲಿ ತನ್ನ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳಬಹುದು.

మరింత సమాచారం తెలుసుకోండి: