ಕೊರೋನಾ ವೈರಸ್ ಸೋಂಕು ಹೆಚ್ಚಾಗದಂತೆ ತಡೆಯಲು ಸರ್ಕಾರಗಳು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡರೂ ಕೂಡ ಯಾವುದೇ ಪ್ರಯೋಜನ ವಾಗದೇ ಇರುವುದು ಜೊತೆಗೆ ರಾಜ್ಯಗಳಿಗೆ ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟಿಗೆ ಸಿಲುಕಿದ ಕಾರಣ ಬಂದ್ ಆಗಿದ್ದ ಎಲ್ಲಾ ವಾಣಿಜ್ಯ ಸಂಸ್ಥೆಗಳನ್ನು ತೆರೆಯಲಾಗಿದೆ. ಆದರೆ ಮಕ್ಕಳಲ್ಲಿ ಅತೀವೇಗವಾಗಿ ಕೊರೋನಾ ಸೋಂಕು ಹರಡುವ ಕಾರಣ ಶಾಲಾ ಕಾಲೇಜುಗಳನ್ನು ಈಗಲೇ ತೆರೆಯದಿರಲು ಸರ್ಕಾರ ನಿರ್ಧರಿಸಿದೆ.  ಆದರೆ ಈ ನಡುವೆ  ಶಾಲಾ ಮಕ್ಕಳಿಗೆ ಶಾಲಾ ದಾಖಲಾತಿಯನ್ನು ಆರಂಭಿಸಲು ಸರ್ಕಾರ ಕೆಲವು ನಿಯಮಗಳ ವಿಧಿಸುವುದರ ಮೂಲಕ ಅನುಮತಿಯನ್ನು ನೀಡಿದೆ. ಅಷ್ಟಕ್ಕೂ ಆ ನಿಯಮಗಳು ಏನು ಗೊತ್ತಾ.?

 

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 2020-21ನೇ ಸಾಲಿಗೆ ಶಾಲೆಗಳಲ್ಲಿ ಮಕ್ಕಳನ್ನು ಹೊಸದಾಗಿ ದಾಖಲಾತಿ ಮಾಡಿಕೊಳ್ಳಲು ಸರ್ಕಾರದಿಂದ ಅವಕಾಶ ಕಲ್ಪಿಸಲಾಗಿದ್ದು, ಮಕ್ಕಳನ್ನು ಶಾಲೆಗಳಲ್ಲಿ ಹೊಸದಾಗಿ ದಾಖಲು ಮಾಡುವಂತಹ ಪೋಷಕರು ಶಾಲೆಗೆ ಭೇಟಿ ನೀಡಿ ಅಗತ್ಯ ದಾಖಲಾತಿಗಳನ್ನು ನೀಡಬಹುದಾಗಿದೆ.

 

ಹಿಂದಿನ ವರ್ಷ ಶಾಲೆಗಳಲ್ಲಿ ದಾಖಲಾತಿ ಪಡೆದುಕೊಂಡಿರುವಂತಹ ಮಕ್ಕಳನ್ನು ಮುಂದಿನ ತರಗತಿಗೆ ಬಡ್ತಿ ನೀಡುವ ಸಂಬಂಧ ಶಾಲಾ ಆಡಳಿತ ಮಂಡಳಿಯವರು ಪೋಷಕರಿಗೆ ಶುಲ್ಕ ಪಾವತಿಸುವಂತೆ ಒತ್ತಾಯಿಸುವಂತ್ತಿಲ್ಲ. ಖಾಸಗಿ ಶಾಲಾ ಆಡಳಿತ ಮಂಡಳಿಗಳ ಜೊತೆ ಸಭೆ ನಡೆಸಿ ಮಾರ್ಗದರ್ಶನ ನೀಡಿದೆ. ಶಾಲೆಯವರು ನಿಗಧಿಪಡಿಸಿರುವ ಶುಲ್ಕದ ವಿವರಗಳನ್ನು ಸಂಬಂಧಪಟ್ಟ ಶಾಲಾ ಸೂಚನಾ ಫಲಕದಲ್ಲಿ ಸಾರ್ವಜನಿಕರು/ಪೋಷಕರ ಗಮನಕ್ಕೆ ತರಬೇಕು. ಯಾವುದೇ ಒತ್ತಾಯ ಮಾಡದೇ ನಿಗಧಿತ ಶುಲ್ಕವನ್ನಷ್ಟೇ ಪೋಷಕರು ಇಚ್ಛೆಪಟ್ಟಲ್ಲಿ ಮಾತ್ರ ಶುಲ್ಕವನ್ನು ಶಾಲೆಗಳಲ್ಲಿ ಪಡೆದುಕೊಳ್ಳಬೇಕು.

 

ಇಲಾಖಾ ಅನುಮತಿ ಇಲ್ಲದೆ ಅನಧಿಕೃತ ಶಾಲೆಗಳನ್ನು ಪ್ರಾರಂಭಿಸಲು ಅವಕಾಶವಿರುವುದಿಲ್ಲ ಹಾಗೂ ಸರ್ಕಾರದ ಶಾಲೆಗಳನ್ನು ಪ್ರಾರಂಭಿಸಲು ಅನುಮತಿ ನೀಡಿದ ನಂತರ ಈ ವರ್ಷದ ಶೈಕ್ಷಣಿಕ ಅವಧಿಗಳನ್ನು ಪರಿಗಣಿಸಿ ಪಾಠ ಬೋಧನೆಗೆ ಅವಕಾಶ ಮಾಡಿಕೊಡಲಾಗುತ್ತದೆ.

 

ಸರ್ಕಾರ/ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ ಶುಲ್ಕ ವಸೂಲಾತಿಗೆ ವಿದ್ಯಾರ್ಥಿಗಳ ಪೋಷಕರಿಗೆ ಒತ್ತಾಯಿಸುವುದು ಅಥವಾ ದೂರುಗಳು ಕಂಡುಬಂದಲ್ಲಿ ಅಂತಹ ಶಾಲೆಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ಪೋಷಕರು ತಮ್ಮ ಅಹವಾಲು/ದೂರುಗಳನ್ನು ಸಂಬಂಧಪಟ್ಟ ತಾಲ್ಲೂಕು ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿಗೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿ ದೂ.ಸಂ:08262-221400ನ್ನು ಅಥವಾ ಲಿಖಿತ ರೂಪದಲ್ಲಿ ಸಲ್ಲಿಸಬಹುದಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

మరింత సమాచారం తెలుసుకోండి: