ಬೆಂಗಳೂರು: ಚಳಿಗಾಲದ ಅಧಿವೇಶನ ಮೂರನೇ ದಿನವಾದ ಇಂದು ಕಲಾಪದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಬಿಜೆಪಿ ಸಚಿವ ಮಾಧುಸ್ವಾಮಿ ಅವರ ನಡುವೆ ಮಾತಿನ ವಾಕ್ಸಮರ ನಡೆಯಿತು.   ಸಿದ್ದರಾಮಯ್ಯ-ಮಾಧುಸ್ವಾಮಿ ಜುಗಲ್‌ಬಂದಿ ನಡೆಯುತ್ತಿದೆ. ಕಲಾಪದ ಮೂರನೇ ದಿನವೂ ಇದು ಮುಂದುವರೆದಿದ್ದು, ಇವರಿಬ್ಬರ ನಡುವೆ ನಡೆದ ರಾಮ-ರಾವಣನ ವೇಷದ ಚರ್ಚೆ ಗಮನ ಸೆಳೆಯಿತು.ಇಂದು ಬಜೆಟ್‌ ಬಗ್ಗೆ ಚರ್ಚೆ ಆರಂಭವಾಗಿತ್ತು, ಸಿದ್ದರಾಮಯ್ಯ ಅವರು ಚರ್ಚೆ ನಡೆಸುತ್ತಿದ್ದರು, ಮಾತನಾಡುತ್ತಾ ಮಾತು ಕಲಾಪಕ್ಕೆ ಮಾಧ್ಯಮಗಳನ್ನು ನಿಷೇಧಿಸಿರುವುದರ ಕಡೆಗೆ ಹೊರಳಿತು.


ಸಂತ್ರಸ್ತರು ಬಿಜೆಪಿ, ಆರ್‌ಎಸ್‌ಎಸ್‌ ಕಚೇರಿಗೆ ಬರಬೇಕಾ?


ಆಗ ತಟ್ಟನೆ ಎದ್ದ ಸಚಿವ ಮಾಧುಸ್ವಾಮಿ, ಸಿದ್ದರಾಮಯ್ಯ ಅವರು ವಿಷಯಾಂತರ ಮಾಡುತ್ತಿದ್ದಾರೆ, ವಿತ್ತಿಯ ಬಗ್ಗೆ ಮಾತನಾಡುವುದು ಬಿಟ್ಟು ಮಾಧ್ಯಮದ ಕಡೆಗೆ ಹೊರಳಿದ್ದಾರೆ, ಈಗೇನು ಮಾಧ್ಯಮ ನಿರ್ಬಂಧದ ಬಗ್ಗೆ ಚರ್ಚೆ ನಡೆಯಬೇಕೆ ಅಥವಾ ಬಜೆಟ್‌ ಬಗ್ಗೆಯೋ ಎಂದು ಜೋರು ಮಾಡಿ ಕೇಳಿದರು.  ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, 'ಮಾಧುಸ್ವಾಮಿ ನೀವು ಯಾವಾಗ ಹೇಗೆ ನಡೆದುಕೊಂಡಿದ್ದೇರೆಂದು ಗೊತ್ತಿದೆ. ಈ ಕಡೆಯಿದ್ದಾಗ (ವಿಪಕ್ಷ) ಒಂದು ವೇಷ ತೊಡುತ್ತೀರಿ, ಆ ಕಡೆ ಇದ್ದಾಗ ಒಂದು ವೇಷ ತೊಡುತ್ತೀರಿ' ಎಂದು ಸಿದ್ದರಾಮಯ್ಯ ಅವರು ಛೇಡಿಸುವ ದನಿಯಲ್ಲಿ ಹೇಳಿದರು.


ಒಮ್ಮೆ ನೀವು ರಾವಣ, ಒಮ್ಮೆ ನಾವು ರಾವಣ. ಇದಕ್ಕೆ ನಕ್ಕ ಮಾಧುಸ್ವಾಮಿ, ಸಿದ್ದರಾಮಯ್ಯ ಅವರನ್ನು ಸಂತೈಸುತ್ತಾ, 'ಎಲ್ಲರೂ ಅದನ್ನೇ ಅಲ್ಲವೇ ಮಾಡುತ್ತಿರುವುದು, ಒಮ್ಮೆ ನೀವು ರಾವಣ ಆಗ್ತೀರಿ ಆಗ ನಾನು ರಾಮ ಆಗ್ತೀನಿ.ರಾಮ ಆದಾಗ ನಾವು ರಾವಣ ಆಗ್ತೀವಿ' ಎಂದು ಹೇಳಿದರು.'ಪತ್ರಿಕಾರಂಗಕ್ಕೂ ಸಂವಿಧಾನದಲ್ಲಿ ಸಮಾನ ಪ್ರಾಮುಖ್ಯತೆ ಇದೆ'. ಸಿದ್ದರಾಮಯ್ಯ ಅವರು ಮುಂದುವರೆಸಿ, 'ಸಂವಿಧಾನದಲ್ಲಿ ಪತ್ರಿಕಾರಂಗಕ್ಕೂ ಶಾಸಕಾಂಗ,ನ್ಯಾಯಾಂಗ, ಕಾರ್ಯಾಂಗಕ್ಕೆ ಇರುವಷ್ಟೆ ಪ್ರಾಮುಖ್ಯತೆ ಇದೆ ಮಾಧ್ಯಮದ ಹಕ್ಕನ್ನು ಮೊಟಕುಗೊಳಿಸುವುದು ಒಳ್ಳೆಯದಲ್ಲ' ಎಂದರು. ಚಾನೆಲ್ ಅನ್ನು ಸರ್ಕಾರದಿಂದಲೇ ಪ್ರಾರಂಭ ಮಾಡುವ ಯೋಚನೆಯನ್ನು ನಾವು ಮಾಡಿದ್ದೇವು, ಆದರೆ ನಂತರ ಅದನ್ನು ಕೈಬಿಟ್ಟೆವು ಎಂದು ಸಿದ್ದರಾಮಯ್ಯ ಹೇಳಿದರು. ಆಗ ಸಚಿವ ಬೊಮ್ಮಾಯಿ ಅವರು, ಅದಕ್ಕೆ ಏನು ಕಾರಣ ಎಂದು ಕೇಳಿದರು, 'ನಾವಿಬ್ಬರೇ ಇದ್ದಾಗ ಹೇಳುತ್ತೇನೆ ಸುಮ್ಮನಿರು' ಎಂದು ನಕ್ಕರು ಸಿದ್ದರಾಮಯ್ಯ.


మరింత సమాచారం తెలుసుకోండి: